VIDEO: ನಿಜಕ್ಕೂ ಇದು ನೋ ಬಾಲಾ? ಇಲ್ಲಿದೆ ಉತ್ತರ 

Updated on: May 28, 2025 | 8:34 AM

IPL 2025 RCB vs LSG: ಇಂಡಿಯನ್ ಪ್ರೀಮಿಯರ್ ಲೀಗ್​ನ 70ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 227 ರನ್ ಕಲೆಹಾಕಿತು. ಈ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18.4 ಓವರ್​ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ ಆರ್​ಸಿಬಿ 6 ವಿಕೆಟ್​ಗಳ ಜಯ ಸಾಧಿಸಿದೆ.

ಐಪಿಎಲ್​ನ 70ನೇ ಪಂದ್ಯವು ಹಲವು ನಾಟಕೀಯ ತಿರುವುಗಳಿಗೆ ಸಾಕ್ಷಿಯಾಗಿತ್ತು. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್​ ಪರ ರಿಷಭ್ ಪಂತ್ ಭರ್ಜರಿ ಶತಕ ಬಾರಿಸಿದ್ದರು. ವಿಶೇಷ ಎಂದರೆ ಕಳೆದ 12 ಪಂದ್ಯಗಳಲ್ಲಿ ಪಂತ್ ಕಡೆಯಿಂದ ನಿರೀಕ್ಷಿತ ಪ್ರದರ್ಶನವೇ ಮೂಡಿಬಂದಿರಲಿಲ್ಲ. ಆದರೆ ಕೊನೆಯ ಮ್ಯಾಚ್​ನಲ್ಲಿ ಅಜೇಯ 118 ರನ್ ಬಾರಿಸಿದ್ದರು. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ 20 ಓವರ್​ಗಳಲ್ಲಿ 227 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ ಪರ ಜಿತೇಶ್ ಶರ್ಮಾ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆದರೆ ಕೊನೆಯ ಹಂತದಲ್ಲಿ ರಿವರ್ಸ್ ಸ್ವೀಪ್ ಶಾಟ್ ಬಾರಿಸಲು ಹೋಗಿ ಜಿತೇಶ್ ಕ್ಯಾಚ್ ನೀಡಿದ್ದರು. ಅದೃಷ್ಟವಶಾತ್ ಅದು ನೋ ಬಾಲ್​ ಆಗಿತ್ತು. ದಿಗ್ವೇಶ್ ರಾಥಿ ಬ್ಯಾಕ್ ಫೂಟ್ ನೋ ಬಾಲ್ ಮಾಡಿದ್ದರಿಂದ ಜಿತೇಶ್ ಶರ್ಮಾಗೆ ಜೀವದಾನ ಲಭಿಸಿತು.

ಇದರ ಬೆನ್ನಲ್ಲೇ ದಿಗ್ವೇಶ್ ರಾಥಿ ಅವರ ಕಾಲು ಸೈಡ್​ಲೈನ್​ಗೆ ತಾಗಿಲ್ಲ ಎಂಬ ವಾದ ಕೂಡ ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬಂದಿದೆ. ಹಾಗಿದ್ರೆ, ನಿಜಕ್ಕೂ ಅದು ನೋ ಬಾಲ್ ಆಗಿತ್ತಾ? ಎಂದು ನೋಡುವುದಾದರೆ…

ಇಲ್ಲಿ ದಿಗ್ವೇಶ್ ರಾಥಿ ಅವರ ಶೂಸ್​ನ ಸಣ್ಣ ಭಾಗ ರಿಟರ್ನ್​ ಕ್ರೀಸ್​ಗೆ (ಸೈಡ್ ಲೈನ್) ತಾಗಿದೆ. ಸೈಡ್ ನೋಬಾಲ್ ಎಂದು ಪರಿಗಣಿಸಲು ಲೈನ್ ದಾಟಬೇಕಿಲ್ಲ. ಅಂದರೆ ಸಾಮಾನ್ಯವಾಗಿ ಲೈನ್ ನೋ ಬಾಲ್ ನೀಡಬೇಕಿದ್ದರೆ ಬೌಲರ್​ನ ಕಾಲು ಕ್ರೀಸ್​ ದಾಟಿರಬೇಕು. ಆದರೆ ಸೈಡ್ ನೋಬಾಲ್​ ವಿಷಯದಲ್ಲಿ ರಿಟರ್ನ್​ ಕ್ರೀಸ್​ಗೆ ಶೂಸ್​ನ ಭಾಗ ತಾಗಿದರೆ ಸಾಕು. ಬದಲಾಗಿ ಕಾಲಿನ ಭಾಗ ಲೈನ್​ ಅನ್ನು ದಾಟಬೇಕಾಗಿಲ್ಲ.

ಅದರಂತೆ 17ನೇ ಓವರ್​ನ ಮೊದಲ ಎಸೆತದ ವೇಳೆ ದಿಗ್ವೇಶ್ ರಾಥಿ ಅವರ ಹಿಂಗಾಲಿನ ಕೆಲ ಭಾಗ ರಿಟರ್ನ್​ ಕ್ರೀಸ್​ಗೆ ತಾಗಿದೆ. ಹೀಗಾಗಿಯೇ ಮೂರನೇ ಅಂಪೈರ್ ಅದನ್ನು ನೋ ಬಾಲ್ ಎಂದು ಪರಿಗಣಿಸಿದ್ದಾರೆ.ಹಾಗಾಗಿ ಸೋಷಿಯಲ್ ಮೀಡಿಯಾದಲ್ಲಿ ಮಾಡುತ್ತಿರುವ ನೋ ಬಾಲ್ ಅಲ್ಲ ಎಂಬ ವಾದಕ್ಕೆ ಯಾವುದೇ ಹುರುಳಿಲ್ಲ.

ಇನ್ನು ಸೈಡ್ ನೋಬಾಲ್​ನಿಂದ ಸಿಕ್ಕ ಜೀವದಾನವನ್ನು ಬಳಸಿಕೊಂಡ ಜಿತೇಶ್ ಶರ್ಮಾ ಮರು ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದರು. ಈ ಮೂಲಕ ಅರ್ಧಶತಕ ಪೂರೈಸಿದರು. ಅಲ್ಲದೆ ಅಂತಿಮವಾಗಿ 33 ಎಸೆತಗಳಲ್ಲಿ 85 ರನ್ ಬಾರಿಸಿ ಆರ್​ಸಿಬಿ ತಂಡಕ್ಕೆ 6 ವಿಕೆಟ್​ಗಳ ಜಯ ತಂದುಕೊಟ್ಟರು.