VIDEO: ಸಂಜೀವ್ ಗೊಯೆಂಕಾನ ಕ್ಯಾರೇ ಮಾಡದ ಕೆಎಲ್ ರಾಹುಲ್
IPL 2025 LSG vs DC: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 40ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ 159 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 17.5 ಓವರ್ಗಳಲ್ಲಿ ಗುರಿ ತಲುಪುವ ಮೂಲಕ 8 ವಿಕೆಟ್ಗಳ ಜಯ ಸಾಧಿಸಿದೆ.
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 40ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡ ಭರ್ಜರಿ ಜಯ ಸಾಧಿಸಿದೆ. ಲಕ್ನೋನ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿದ್ದರು.
160 ರನ್ಗಳ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಕೆಎಲ್ ರಾಹುಲ್ ಅಜೇಯ 57 ರನ್ ಬಾರಿಸಿ ತಂಡವನ್ನು 17.5 ಓವರ್ಗಳಲ್ಲಿ ಗೆಲುವಿನ ದಡ ಸೇರಿಸಿದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ 8 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿತು. ಈ ಗೆಲುವಿನ ಬಳಿಕ ನಡೆದ ಆಟಗಾರರ ಹಸ್ತಲಾಘವದ ವೇಳೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕರಾದ ಸಂಜೀವ್ ಗೊಯೆಂಕಾ ಕಾಣಿಸಿಕೊಂಡಿದ್ದರು.
ಈ ವೇಳೆ ಕೆಎಲ್ ರಾಹುಲ್ಗೆ ಶೆಕ್ಹ್ಯಾಂಡ್ ನೀಡಿ ಸಂಜೀವ್ ಗೊಯೆಂಕಾ ಮಾತಿಗೆ ಮುಂದಾಗಿದ್ದರು. ಆದರೆ ಕೆಎಲ್ ರಾಹುಲ್ ಅವರೊಂದಿಗೆ ಮಾತಿಗೆ ನಿಲ್ಲದೆ, ಹಸ್ತಲಾಘವ ನೀಡಿ ಮುಂದುವರೆದಿದ್ದರು. ಇದೀಗ ಸಂಜೀವ್ ಗೊಯೆಂಕಾ ಮಾತನಾಡಲು ಮುಂದಾದರೂ ನಿರ್ಲಕ್ಷಿಸಿ ಮುನ್ನಡೆದ ಕೆಎಲ್ ರಾಹುಲ್ ಅವರ ವಿಡಿಯೋ ವೈರಲ್ ಆಗಿದೆ.
ಇನ್ನು ಕೆಎಲ್ ರಾಹುಲ್ ಅವರ ಈ ನಿರ್ಲಕ್ಷ್ಯಕ್ಕೆ ಮುಖ್ಯ ಕಾರಣ ಕಳೆದ ಸೀಸನ್ನಲ್ಲಿನ ಘಟನೆ. ಐಪಿಎಲ್ 2024 ರಲ್ಲಿ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದರು. ಈ ವೇಳೆ ಎಲ್ಎಸ್ಜಿ ಸೋತಾಗ ಸಂಜೀವ್ ಗೊಯೆಂಕಾ ಮೈದಾನದಲ್ಲೇ ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಇದರಿಂದ ಬೇಸರಗೊಂಡಿದ್ದ ಕೆಎಲ್ ರಾಹುಲ್ ಈ ಬಾರಿಯ ಹರಾಜಿಗೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತೊರೆದಿದ್ದರು. ಅದರಂತೆ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ರಾಹುಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಖರೀದಿಸಿದೆ. ಇದೀಗ ಹಳೆಯ ತಂಡದ ವಿರುದ್ಧ ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಆಡಿ ಕೆಎಲ್ ರಾಹುಲ್ ಸೇಡು ತೀರಿಸಿಕೊಂಡಿದ್ದಾರೆ.