VIDEO: ಗೆಲ್ಲುವ ಪಂದ್ಯವನ್ನು ‘ಕೈ ಚೆಲ್ಲಿದ’ ರಿಷಭ್ ಪಂತ್
IPL 2025 DC vs LSG: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಪರ ಮಿಚೆಲ್ ಮಾರ್ಷ್ (72) ಹಾಗೂ ನಿಕೋಲಸ್ ಪೂರನ್ (75) ಅರ್ಧಶತಕ ಬಾರಿಸಿದ್ದರು. ಈ ಅರ್ಧಶತಕಗಳ ನೆರವಿನಿಂದ ಲಕ್ನೋ ತಂಡ 209 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಅಶುತೋಷ್ ಶರ್ಮಾ 31 ಎಸೆತಗಳಲ್ಲಿ ಅಜೇಯ 66 ರನ್ ಸಿಡಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.
ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2025) 4ನೇ ಪಂದ್ಯವು ರಣರೋಚಕ ಪೈಪೋಟಿಗೆ ಸಾಕ್ಷಿಯಾಗಿತ್ತು. ವಿಶಾಖಪಟ್ಟಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 209 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವು 19 ಓವರ್ಗಳ ಮುಕ್ತಾಯದ ವೇಳೆಗೆ 9 ವಿಕೆಟ್ ಕಳೆದುಕೊಂಡು 204 ರನ್ ಗಳಿಸಿತ್ತು. ಅಲ್ಲದೆ ಕೊನೆಯ ಓವರ್ನಲ್ಲಿ ಡೆಲ್ಲಿ ಪಡೆಗೆ 6 ರನ್ಗಳ ಅವಶ್ಯಕತೆಯಿತ್ತು. ಅತ್ತ ಲಕ್ನೋ ಸೂಪರ್ ಜೈಂಟ್ಸ್ಗೆ ಒಂದು ವಿಕೆಟ್ನ ಅಗತ್ಯತೆ.
20ನೇ ಓವರ್ ಎಸೆದ ಶಹಬಾಝ್ ಅಹ್ಮದ್ ಮೊದಲ ಎಸೆತದಲ್ಲಿ ಮೋಹಿತ್ ಶರ್ಮಾ ಮುನ್ನುಗ್ಗಿ ಬಂದು ರನ್ಗಳಿಸಲು ಯತ್ನಿಸಿದ್ದರು. ಆದರೆ ಚೆಂಡು ಪ್ಯಾಡ್ಗೆ ತಗುಲಿ ವಿಕೆಟ್ ಕೀಪರ್ನತ್ತ ಸಾಗಿತು. ಈ ವೇಳೆ ಚೆಂಡನ್ನು ಹಿಡಿಯುವಲ್ಲಿ ರಿಷಭ್ ಪಂತ್ ವಿಫಲರಾದರು.
ಅತ್ತ ಅದಾಗಲೇ ಕ್ರೀಸ್ನಿಂದ ಮಾರು ದೂರ ಹೋಗಿದ್ದ ಮೋಹಿತ್ ಶರ್ಮಾ ಅವರನ್ನು ಸುಲಭವಾಗಿ ಸ್ಟಂಪ್ ಔಟ್ ಮಾಡುವ ಅವಕಾಶವನ್ನು ರಿಷಭ್ ಪಂತ್ ಕೈಚೆಲ್ಲಿಕೊಂಡರು. ಹೀಗೆ ಅಂತಿಮ ಹಂತದಲ್ಲಿ ನೀಡಿದ ಒಂದೇ ಒಂದು ಜೀವದಾನವು ಲಕ್ನೋ ಸೂಪರ್ ಜೈಂಟ್ಸ್ ತಂಡದ ಗೆಲುವನ್ನು ಕಸಿದುಕೊಂಡಿತು.
ಏಕೆಂದರೆ 2ನೇ ಎಸೆತದಲ್ಲಿ ಮೋಹಿತ್ ಶರ್ಮಾ ಸಿಂಗಲ್ ತೆಗೆದದರು. ಮೂರನೇ ಎಸೆತದಲ್ಲಿ ಅಶುತೋಷ್ ಶರ್ಮಾ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 1 ವಿಕೆಟ್ನ ರೋಚಕ ಜಯ ತಂದುಕೊಟ್ಟರು.