DC vs RCB: ರಾಹುಲ್ ವಿರುದ್ಧ ಸೇಡು ತೀರಿಸಿಕೊಂಡ ಹೇಜಲ್‌ವುಡ್; ವಿಡಿಯೋ
IPL 2026, DC vs RCB Match 39: ಐಪಿಎಲ್ 2026 ರ 39ನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಿದ್ದವು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಡೆಲ್ಲಿ, ಮೊದಲ 3 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು ಕುಸಿಯಿತು. ಭುವನೇಶ್ವರ್ ಕುಮಾರ್ ಮತ್ತು ಹೇಜಲ್‌ವುಡ್‌ರ ಮಾರಕ ದಾಳಿಗೆ ಡೆಲ್ಲಿ ತತ್ತರಿಸಿತು. ಹಿಂದಿನ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಅರ್ಧಶತಕ ಬಾರಿಸಿದ್ದ ಕೆಎಲ್ ರಾಹುಲ್ ಅವರನ್ನು ಹೇಜಲ್‌ವುಡ್ ಬೇಗನೇ ಔಟ್ ಮಾಡಿ ಸೇಡು ತೀರಿಸಿಕೊಂಡರು.
ಐಪಿಎಲ್ 2026 ರ 39ನೇ ಪಂದ್ಯ ದೆಹಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಿತು. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ ಮೊದಲ 3 ಓವರ್ಗಳಲ್ಲೇ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಭುವನೇಶ್ವರ್ ಕುಮಾರ್ ಹಾಗೂ ಹೇಜಲ್‌ವುಡ್ ಅವರ ದಾಳಿಗೆ ತತ್ತರಿಸಿ ಹೋಗಿರುವ ಡೆಲ್ಲಿ ಬ್ಯಾಟರ್ಗಳಿಗೆ ಖಾತೆ ತೆರೆಯಲು ಸಾಧ್ಯವಾಗುತ್ತಿಲ್ಲ.
ಅದರಲ್ಲೂ ಇದೇ ಉಭಯ ತಂಡಗಳ ನಡುವೆ ಏಪ್ರಿಲ್ 18 ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ದೆಹಲಿ 6 ವಿಕೆಟ್‌ಗಳಿಂದ ಆರ್ಸಿಬಿಯನ್ನು ಸೋಲಿಸಿತ್ತು. ಆ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್, ಆರ್ಸಿಬಿ ವಿರುದ್ಧ ಗೆಲುವಿನ ಅರ್ಧಶತಕ ಬಾರಿಸಿದ್ದರು. ಅಲ್ಲದೆ ಆ ಪಂದ್ಯದಲ್ಲಿ ಅವರು ಹೇಜಲ್‌ವುಡ್ ವಿರುದ್ಧ ಸರಾಗವಾಗಿ ರನ್ ಕಲೆಹಾಕಿದ್ದರು. ತವರು ಮೈದಾನದ ಲಾಭ ಪಡೆದುಕೊಂಡಿದ್ದ ರಾಹುಲ್ ಹೇಜಲ್‌ವುಡ್ ಬೌಲಿಂಗ್ನಲ್ಲಿ ಬೌಂಡರಿ ಹಾಗೂ ಸಿಕ್ಸರ್ಗಳ ಮಳೆಗರೆದಿದ್ದರು.
ಹೀಗಾಗಿ ಇಂದಿನ ಪಂದ್ಯದಲ್ಲಿ ರಾಹುಲ್ ಮೇಲೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದ್ದರು. ಅದರಂತೆ ಆರ್ಸಿಬಿ ಪರ ಎರಡನೇ ಓವರ್ ಬೌಲಿಂಗ್ ಮಾಡಿದ ಹೇಜಲ್‌ವುಡ್, ಎಸೆದ ಮೊದಲ ಎಸೆತದಲ್ಲೇ ರಾಹುಲ್ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. ಹೇಜಲ್‌ವುಡ್ ಎಸೆದ ಶಾರ್ಟ್ ಬಾಲ್ ಅನ್ನು ಸಿಕ್ಸರ್ಗಟ್ಟುವ ಯತ್ನದಲ್ಲಿ ರಾಹುಲ್ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದರು. ಕಳೆದ ಮುಖಾಮುಖಿಯಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ್ದ ರಾಹುಲ್, ಈ ಪಂದ್ಯದಲ್ಲಿ ಕೇವಲ 1 ರನ್ ಬಾರಿಸಲಷ್ಟೇ ಶಕ್ತರಾದರು.
ಇನ್ನು ಇದೇ ಓವರ್ನಲ್ಲಿಯೇ ಹೇಜಲ್‌ವುಡ್ ಮತ್ತೊಂದು ವಿಕೆಟ್ ಉರುಳಿಸಿದರು. ರಾಹುಲ್ ವಿಕೆಟ್ ಪತನದ ಬಳಿಕ ಬಂದ ಸಮೀರ್ ರಿಜ್ವಿ ಕೂಡ ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಕೀಪರ್ಗೆ ಕ್ಯಾಚಿತ್ತು ಖಾತೆ ತೆರೆಯದೆ ನಿರ್ಗಮಿಸಿದರು.