RCB vs CSK Turning Point: ಟಿಮ್ ಡೇವಿಡ್ಗೆ ಜೀವದಾನ ನೀಡಿ ಕೆಟ್ಟ ಸಿಎಸ್ಕೆ
Tim David's Explosive IPL 70: ಚೆನ್ನೈ ವಿರುದ್ಧ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ, ಆರ್ಸಿಬಿ ಸ್ಫೋಟಕ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ 25 ಎಸೆತಗಳಲ್ಲಿ 70 ರನ್ ಚಚ್ಚಿದರು. 26 ರನ್ ಗಳಿಸಿದ್ದಾಗ ನೋ-ಬಾಲ್‌ನಿಂದ ಜೀವದಾನ ಪಡೆದ ಡೇವಿಡ್, ನಂತರ ಸಿಕ್ಸರ್ಗಳ ಸುರಿಮಳೆಗೈದು ತಂಡದ ಮೊತ್ತವನ್ನು 250 ರನ್‌ಗಳಿಗೆ ಏರಿಸಿದರು. ಈ ಒಂದು ನೋ-ಬಾಲ್ ಸಿಎಸ್‌ಕೆಗೆ 50ಕ್ಕೂ ಹೆಚ್ಚು ರನ್‌ಗಳ ದಂಡ ವಿಧಿಸಿ, ಪಂದ್ಯದ ಗತಿಯನ್ನೇ ಬದಲಿಸಿತು.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬೆಂಗಳೂರಿನಲ್ಲಿ ನಡೆದ ಐಪಿಎಲ್ 11ನೇ ಪಂದ್ಯದಲ್ಲಿ ಆರ್ಸಿಬಿ ತಂಡದ ಸ್ಫೋಟಕ ದಾಂಡಿಗ ಟಿಮ್ ಡೇವಿಡ್ ಕೇವಲ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 70 ರನ್ ಬಾರಿಸಿದರು. ಇವರ ಈ ಅಬ್ಬರದ ಬ್ಯಾಟಿಂಗ್ನಿಂದ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ ಬರೋಬ್ಬರಿ 250 ರನ್ ಕಲೆಹಾಕಿತು. ಮಾತ್ರವಲ್ಲದೆ ತಂಡ ಕೊನೆಯ 5 ಓವರ್ಗಳಲ್ಲಿ 90 ಕ್ಕೂ ಅಧಿಕ ರನ್ ಪೇರಿಸಿತು.
ವಾಸ್ತವವಾಗಿ ಟಿಮ್ ಡೇವಿಡ್ ಕೇವಲ 26 ರನ್ ಕಲೆಹಾಕಿದ್ದಾಗ ವಿಕೆಟ್ ಕೈಚೆಲ್ಲಿದ್ದರು. ಸಿಎಸ್ಕೆ ವೇಗಿ ಅನ್ಶುಲ್ ಕಾಂಬೋಜ್ ಮಾಡಿದ 18ನೇ ಓವರ್ನಲ್ಲಿ ಡೇವಿಡ್ ಕ್ಲೀನ್ ಬೌಲ್ಡ್ ಆಗಿದ್ದರು. ಆಗ ತಂಡದ ಮೊತ್ತ 199 ರನ್ಗಳಾಗಿತ್ತು. ಆದರೆ ಕಾಂಬೋಜ್ ಮಾಡಿದ 18ನೇ ಓವರ್ನ 5ನೇ ಎಸೆತ ನೋ ಬಾಲ್ ಆಗಿತ್ತು. ಇದರಿಂದ ಡೇವಿಡ್ ಔಟಾಗುವುದರಿಂದ ಪಾರಾದರು.
ಈ ಜೀವದಾನದ ಲಾಭ ಪಡೆದ ಡೇವಿಡ್ 19ನೇ ಓವರ್ನಲ್ಲಿ 1 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 30 ರನ್ ಕಲೆಹಾಕಿದರು. ಇದರ ಜೊತೆಗೆ ತಮ್ಮ ಅರ್ಧಶತಕವನ್ನು ಪೂರೈಸಿದರು. ಹಾಗೆಯೇ 20ನೇ ಓವರ್ನಲ್ಲೂ ಬೌಂಡರಿ ಬಾರಿಸಿದರು. ಅಂದರೆ ಕಾಂಬೋಜ್ ಮಾಡಿದ ಅದೊಂದು ನೋ ಬಾಲ್ ಸಿಎಸ್‌ಕೆಗೆ 50 ಕ್ಕೂ ಅಧಿಕ ರನ್‌ಗಳ ದಂಡ ವಿಧಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ