RR vs DC: ಡೆಲ್ಲಿ ವಿರುದ್ಧ ನಡೆಯದ ರಾಜಸ್ಥಾನ್ ಆರಂಭಿಕರ ಅಬ್ಬರ
RR vs DC IPL 2026: ಐಪಿಎಲ್ 2026 ರ RR vs DC ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ನಿರೀಕ್ಷೆ ಹುಸಿಗೊಳಿಸಿದರು. ಸಾಮಾನ್ಯವಾಗಿ ತಂಡಕ್ಕೆ ಉತ್ತಮ ಆರಂಭ ನೀಡುತ್ತಿದ್ದ ಈ ಜೋಡಿ ಡೆಲ್ಲಿ ವಿರುದ್ಧ ಕೇವಲ 12 ರನ್‌ಗಳಿಗೆ ವಿಕೆಟ್ ಒಪ್ಪಿಸಿತು. ಜೈಸ್ವಾಲ್ 6 ರನ್, ಸೂರ್ಯವಂಶಿ 4 ರನ್ ಗಳಿಸಿ ಔಟಾದರು.
ಐಪಿಎಲ್ 2026 ರ 43 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪರಸ್ಪರ ಮುಖಾಮುಖಿಯಾಗಿದ್ದವು. ಇದು ರಾಜಸ್ಥಾನಕ್ಕೆ ಹತ್ತನೇ ಪಂದ್ಯ ಮತ್ತು ದೆಹಲಿಗೆ ಒಂಬತ್ತನೇ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಅದರಂತೆ ರಾಜಸ್ಥಾನ್ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಮೇಲೆ ಎಂದಿನಂತೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಈ ಪಂದ್ಯದಲ್ಲಿ ಪರಿಣಾಮಕಾರಿ ಇನ್ನಿಂಗ್ಸ್ ಆಡುವಲ್ಲಿ ಇವರಿಬ್ಬರು ವಿಫಲರಾದರು.
ಈ ಆವೃತ್ತಿಯಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಜೋಡಿ ರಾಜಸ್ಥಾನ್ ತಂಡಕ್ಕೆ ಭಾಗಶಃ ಪಂದ್ಯಗಳಲ್ಲಿ ಉತ್ತಮ ಆರಂಭ ಒದಗಿಸಿಕೊಟ್ಟಿದೆ. ಇದರ ಪರಿಣಾಮವಾಗಿ ರಾಜಸ್ಥಾನ್ ಕೂಡ ಈ ಎಲ್ಲಾ ಭಾಗಶಃ ಪಂದ್ಯಗಳನ್ನು ಗೆದ್ದುಕೊಂಡಿದೆ. ಅಂದರೆ ಇವರಿಬ್ಬರು ಮಿಂಚಿದರೆ ರಾಜಸ್ಥಾನ್ ತಂಡಕ್ಕೆ ಗೆಲುವು ಖಚಿತವಂತ್ತಾಗಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಇವರಿಬ್ಬರಿಗೆ ಒಂದಂಕಿ ದಾಟಿ ಹೋಗಲು ಸಾಧ್ಯವಾಗಲಿಲ್ಲ.
ರಾಜಸ್ಥಾನ್ ಪರ ಇನ್ನಿಂಗ್ಸ್ ಆರಂಭಿಸಿದ ಜೈಸ್ವಾಲ್, ಅನುಭವಿ ಮಿಚೆಲ್ ಸ್ಟಾರ್ಕ್ ಬೌಲ್ ಮಾಡಿದ ಮೊದಲ ಓವರ್ನ ಮೊದಲ ಎಸೆತವನ್ನೇ ಭರ್ಜರಿ ಸಿಕ್ಸರ್ ಬಾರಿಸಿದರು. ಆ ನಂತರದ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಮೂರನೇ ಎಸೆತವನ್ನು ಸ್ಟಾರ್ಕ್ ಫುಲ್ ಟಾಸ್ ಬೌಲ್ ಮಾಡಿದರು. ಈ ಎಸೆತದಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿದ ಜೈಸ್ವಾಲ್, ಸ್ಟಾರ್ಕ್ಗೆ ಕ್ಯಾಚ್ ನೀಡಿ ಔಟಾದರು.
ಇನ್ನಿಂಗ್ಸ್ನ ಎರಡನೇ ಓವರ್ನಲ್ಲಿ ಸ್ಟ್ರೈಕ್ಗೆ ಬಂದ ವೈಭವ್ ಸೂರ್ಯವಂಶಿ, ಕೈಲ್ ಜೇಮಿಸನ್ ಬೌಲ್ ಮಾಡಿದ ಎರಡನೇ ಎಸೆತವನ್ನು ಸೀದಾ ಬೌಂಡರಿಗಟ್ಟಿದರು. ಆದರೆ ನಂತರದ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು. ಅಂದರೆ ಇವರಿಬ್ಬರ ವಿಕೆಟ್ ಕೇವಲ 12 ರನ್‌ಗಳಿಗೆ ಪತನವಾಯಿತು. ಜೈಸ್ವಾಲ್ 6 ರನ್ ಬಾರಿಸಿ ಔಟಾದರೆ, ವೈಭವ್ ಇನ್ನಿಂಗ್ಸ್ ಕೇವಲ 4 ರನ್‌ಗಳಿಗೆ ಅಂತ್ಯವಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ