ಮೇಲ್ಸೇತುವೆ ಮೇಲೆ ನೀರು: ಟ್ರಾಫಿಕ್ ಕಾನ್​ಸ್ಟೇಬಲ್ ಪ್ರಯತ್ನ ನೋಡಿಯೂ ಪಾಲಿಕೆ ಅಧಿಕಾರಿಗಳಿಗೆ ಪಾಪಪ್ರಜ್ಞೆ ಕಾಡದಿದ್ದರೆ ಅವರು ಕಾಡುಪಾಪಗಳೇ!

| Updated By: ಸುಷ್ಮಾ ಚಕ್ರೆ

Updated on: Oct 07, 2021 | 6:41 AM

ಜನರಿಗೆ ಅನೇಕ ಭಾಗ್ಯಗಗಳನ್ನು ನೀಡಿದ ಹಿಂದಿನ ಭಾಗ್ಯವಿಧಾತ ಮುಖ್ಯಮಂತ್ರಿಗಳಿಗೆ ಬೆಂಗಳೂರಿನ ರಸ್ತೆಗಳಿಗೂ ಒಂದು ಭಾಗ್ಯ ಕರುಣಿಸದೆ ಅವುಗಳನ್ನು ಹತಭಾಗ್ಯರನ್ನಾಗಿಸುವ ಮನಸ್ಸು ಯಾಕೆ ಬಂತೋ?

ಸರ್ಕಾರಗಳು ಬದಲಾಗುತ್ತವೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಆಯ್ಕೆಯಾಗುವ ಕಾರ್ಪೊರೇಟರ್ ಮತ್ತು ಮೇಯರ್ಗಳು ಬದಲಾಗುತ್ತಾರೆ, ಪಾಲಿಕೆಯ ಕಮೀಶನರ್ ಮತ್ತು ಇತರ ಅಧಿಕಾರಿಗಳೂ ಬದಲಾಗುತ್ತಾರೆ. ಆದರೆ ಈ ಮಹಾನಗರದ ಶಾಪಗ್ರಸ್ತ ರಸ್ತೆಗಳು ಮಾತ್ರ ಯಾವತ್ತೂ ಬದಲಾಗಲಾರವು. ಅವುಗಳ ಶಾಪ ವಿಮೋಚನೆ ಅದ್ಯಾವ ಬದಲಾವಣೆ ಅಗಬೇಕು ಅನ್ನುವುದು ಮಾತ್ರ ನಗರದ ನಿವಾಸಿಗಳಿಗೆ ಅರ್ಥವಾಗುತ್ತಿಲ್ಲ. ಕಸ, ರಸ್ತೆಗುಂಡಿ ಮತ್ತು ಜಲಾವೃತ ರಸ್ತೆಗಳಿಂದ ಬೆಂಗಳೂರಿನ ಕೀರ್ತಿಪತಾಕೆಯನ್ನು ವಿಶ್ವದೆಲ್ಲೆಡೆ ಹಾರಿಸಿದ ಶ್ರೇಯಸ್ಸು ನಮ್ಮ ರಾಜ್ಯದ ಸರ್ಕಾರಗಳು ಮತ್ತು ಪೌರಾಡಳಿತ ಸಂಸ್ಥೆಗೆ ಸಲ್ಲಬೇಕು.

ಒಂದು ಚಿಕ್ಕ ಮಳೆ ಸುರಿದರೂ ಸಾಕು, ನಗರದ ರಸ್ತೆಗಳು ಹೊಂಡಗಳಾಗಿ ಪರಿವರ್ತನೆಗೊಂಡು ಹೊಂಡಾ ಗಾಡಿಗಳಿಗೆ ನಾವ್ಯಾಕೆ ಹೋವರ್ ಕ್ರಾಫ್ಟ್​ಗಳಾಗಿ ರೂಪ ತಳೆಯಲಿಲ್ಲ ಎಂಬ ಯೋಚನೆಗೆ ದೂಡುತ್ತವೆ. ಮಳೆಗಾಲ ಅಂತೇನಿಲ್ಲ, ಮಳೆ ಯಾವ ಕಾಲದಲ್ಲಿ ಬಂದರೂ ರಸ್ತೆಗಳಿಗೆ ಹೊಂಡಗಳಾಗುವ ಭಾಗ್ಯ ತಪ್ಪದು. ಜನರಿಗೆ ಅನೇಕ ಭಾಗ್ಯಗಗಳನ್ನು ನೀಡಿದ ಹಿಂದಿನ ಭಾಗ್ಯವಿಧಾತ ಮುಖ್ಯಮಂತ್ರಿಗಳಿಗೆ ಬೆಂಗಳೂರಿನ ರಸ್ತೆಗಳಿಗೂ ಒಂದು ಭಾಗ್ಯ ಕರುಣಿಸದೆ ಅವುಗಳನ್ನು ಹತಭಾಗ್ಯರನ್ನಾಗಿಸುವ ಮನಸ್ಸು ಯಾಕೆ ಬಂತೋ?

ಭಾಗ್ಯಗಳ ಬಗ್ಗೆ ಮಾತಾಡುವ ಅನಿವಾರ್ಯತೆ ನಗರದ ಕೆ ಆರ್ ಮಾರ್ಕೆಟ್ ಫ್ಲೈ ಓವರ್​ನ ದೌರ್ಭಾಗ್ಯ ಕಂಡು ಎದುರಾಗಿದೆ. ಬೇರೆ ರಸ್ತೆಗಳಲ್ಲಿ ರಾಜಾಕಾಲುವೆ, ರಾಣಿಕಾಲುವೆ ಇಲ್ಲವೇ ಮತ್ಯಾವುದೋ ಕಾಲುವೆಗಳಿಂದ ನೀರು ಹರಿದು ಬಂದಿರಬಹುದು ಅಂತ ಭಾವಿಸೋಣ. ಆದರೆ ಈ ಫ್ಲೈ ಓವರ್ ಮೇಲೆ ಅದ್ಯಾವ ಕಾಲುವೆ ನೀರು ಹರಿದು ಬಂದಿರುತ್ತೆ ಮಾರಾಯ್ರೇ? ಇದರರ್ಥ ಮಳೆ ಬಂದರೆ ಮೇಲ್ಸೇತುವೆ ಮೇಲಿನ ನೀರು ಹರಿದು ಹೋಗಲು ಔಟ್ಲೆಟ್ ಕಲ್ಪಿಸಿಲ್ಲ. ಅದಕ್ಕೆ ಪುಟವಿಟ್ಟಂತೆ ಕೆಟ್ಟು ಕೆರ ಹಿಡಿದಿರುವ ಫ್ಲೈ ಓವರ್ ರಸ್ತೆ!

ಇಲ್ಲೊಬ್ಬ ಟ್ರಾಫಿಕ್ ಪೇದೆ ಪಡುತ್ತಿರುವ ಕಷ್ಟವನ್ನು ಗಮನಿಸಿ. ನೀರು ಕೆಳಗೆ ಹರಿದು ಹೋಗುವಂತೆ ಮಾಡಲು ಅವರು ಪರದಾಡುತ್ತಿದ್ದಾರೆ. ಬಿಬಿಎಮ್​ಪಿ ಯವರು ಮಾಡಬೇಕಿರುವ ಕೆಲಸವನ್ನು ಇವರು ಮಾಡುತ್ತಿದ್ದಾರೆ. ಇದನ್ನೆಲ್ಲ ನೋಡಿಯೂ ದಪ್ಪಚರ್ಮದ ಪಾಲಿಕೆ ಅಧಿಕಾರಿಗಳಲ್ಲಿ ಪಾಪಪ್ರಜ್ಞೆ ಹುಟ್ಟುವುದಿಲ್ಲ.

ಇದನ್ನೂ ಓದಿ:   Viral Video: ಉಕ್ಕಿ ಹರಿಯುತ್ತಿದ್ದ ಕಾಲುವೆಗೆ ಧುಮುಕಿ ತಾಯಿ-ಮಗುವನ್ನು ಕಾಪಾಡಿದ ಪೊಲೀಸ್; ವಿಡಿಯೋ ವೈರಲ್