ಜಮ್ಮು-ಕಾಶ್ಮೀರದ ಪ್ರವಾಹದಲ್ಲಿ ಸಿಲುಕಿದ್ದ ಸೈನಿಕರನ್ನು ರಕ್ಷಿಸಲು ಧೈರ್ಯದಿಂದ ನದಿಗೆ ಧುಮುಕಿದ ಯುವಕರು
ಜಮ್ಮು ಮತ್ತು ಕಾಶ್ಮೀರದಲ್ಲಿ ನಿರಂತರ ಮಳೆಯ ನಡುವೆ ಅಖ್ನೂರ್‌ನ ಯುವಕರು ಪ್ರವಾಹದಿಂದ ಮುಳುಗಿದ್ದ ಗಡಿ ಠಾಣೆಗಳಲ್ಲಿ ಸಿಲುಕಿದ್ದ ಬಿಎಸ್‌ಎಫ್ ಸೈನಿಕರನ್ನು ರಕ್ಷಿಸಿದ್ದಾರೆ. ಅವರ ಧೈರ್ಯಶಾಲಿ ಕಾರ್ಯವು ಪ್ರವಾಹದ ಬಿಕ್ಕಟ್ಟಿನ ಸಮಯದಲ್ಲಿ ಮಾನವೀಯತೆ ಮತ್ತು ಒಗ್ಗಟ್ಟಿನ ಶಕ್ತಿಯನ್ನು ಎತ್ತಿ ತೋರಿಸುತ್ತದೆ. ಸ್ಥಳೀಯ ಯುವಕರು ತಮ್ಮ ಸುರಕ್ಷತೆಯನ್ನು ಪಣಕ್ಕಿಟ್ಟು ಸೈನಿಕರನ್ನು ರಕ್ಷಿಸಲು ಮುಂದಾದರು. ದೋಣಿಗಳು ಮತ್ತು ತಾತ್ಕಾಲಿಕ ವ್ಯವಸ್ಥೆಗಳನ್ನು ಬಳಸಿಕೊಂಡು, ಸಿಲುಕಿದ್ದ ಸಿಬ್ಬಂದಿಯನ್ನು ಸುರಕ್ಷತೆಗೆ ತರಲಾಗಿದೆ ಎಂದು ಅವರು ಖಚಿತಪಡಿಸಿಕೊಂಡರು.
ಶ್ರೀನಗರ, ಆಗಸ್ಟ್ 27: ಜಮ್ಮು ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಭಾರೀ ಪ್ರವಾಹ ಉಂಟಾಗಿದೆ. ನದಿಗಳ ಮಟ್ಟ ಏರುತ್ತಲೇ ಇದ್ದು, ಹಲವು ರಸ್ತೆಗಳು ಕೊಚ್ಚಿಹೋಗಿವೆ. ಇದರ ನಡುವೆ, ಪ್ರವಾಹದ ನೀರಿನಲ್ಲಿ ಮುಳುಗಿದ್ದ ಗಡಿ ಠಾಣೆಗಳಲ್ಲಿದ್ದ ಬಿಎಸ್‌ಎಫ್ ಸೈನಿಕರನ್ನು (BSF Jawans) ಕಾಪಾಡಲು ಸ್ಥಳೀಯ ಯುವಕರ ಗುಂಪೊಂದು ಪ್ರಾಣದ ಹಂಗು ತೊರೆದು ಪ್ರವಾಹದ ನೀರಿಗೆ ಇಳಿದಿವೆ. ಜನರ ಈ ಮಾನವೀಯ ಕಾರ್ಯಾಚರಣೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಜಮ್ಮು ಮತ್ತು ಕಾಶ್ಮೀರದ ಅಖ್ನೂರ್‌ನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಯುವಕರು ಪ್ರವಾಹದಿಂದ ಮುಳುಗಿದ್ದ ಗಡಿ ಠಾಣೆಗಳಲ್ಲಿ ಸಿಲುಕಿದ್ದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿಯನ್ನು ರಕ್ಷಿಸಿದ್ದಾರೆ. ಪರ್ಗವಾಲ್ ಪ್ರದೇಶದಲ್ಲಿ ಯುವಕರ ಗುಂಪೊಂದು ಹಗ್ಗಗಳು ಮತ್ತು ಟ್ಯೂಬ್‌ಗಳ ಸಹಾಯದಿಂದ ಸೈನಿಕರನ್ನು ರಕ್ಷಿಸುತ್ತಿರುವುದನ್ನು ತೋರಿಸುವ ವೀಡಿಯೊ ವೈರಲ್ ಆಗಿದೆ. ಬಿಎಸ್‌ಎಫ್ ಜವಾನರು ಮುಳುಗಿದ ಪ್ರದೇಶಗಳಿಂದ ಹೊರಬರಲು ಹೆಣಗಾಡುತ್ತಿದ್ದಾಗ ಯುವಕರು ಅವರಿಗೆ ಸಹಾಯ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಧಾರಾಕಾರ ಮಳೆಯಿಂದಾಗಿ ಭಾರಿ ಪ್ರವಾಹ ಉಂಟಾಗಿದೆ. ಹಲವಾರು ಠಾಣೆಗಳು ಜಲಾವೃತಗೊಂಡಿದ್ದು, ಸಂಪರ್ಕ ಕಡಿತಗೊಂಡಿದೆ. ಜಮ್ಮು ಪ್ರದೇಶವು ನಿರಂತರ ಮಳೆಯನ್ನು ಎದುರಿಸುತ್ತಿದೆ. ಇದರಿಂದಾಗಿ ದಿಢೀರ್ ಪ್ರವಾಹ, ನೀರಿನ ಮಟ್ಟ ಏರಿಕೆ ಮತ್ತು ಆಸ್ತಿ ಮತ್ತು ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿ ಉಂಟಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

