ಮತ್ತೆ ಟ್ರೋಲ್ ಆದ ಜಯಾ ಬಚ್ಚನ್; ಸೆಲ್ಫೀ ತೆಗೆದುಕೊಳ್ಳಲು ಬಂದ ವ್ಯಕ್ತಿಯನ್ನು ತಳ್ಳಿದ ವಿಡಿಯೋ ವೈರಲ್
ಬಾಲಿವುಡ್ ಹಿರಿಯ ನಟಿ ಹಾಗೂ ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ತಳ್ಳಿ, ಗದರಿದ ವಿಡಿಯೋ ವೈರಲ್ ಆಗಿದೆ. ಪಾರ್ಲಿಮೆಂಟ್ ಕಟ್ಟಡದ ಹೊರಗೆ ಈ ಘಟನೆ ನಡೆದಿದೆ. ಜಯಾ ಬಚ್ಚನ್ ಸಾರ್ವಜನಿಕವಾಗಿ ತನ್ನ ತಾಳ್ಮೆಯನ್ನು ಕಳೆದುಕೊಂಡಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಆಪರೇಷನ್ ಸಿಂಧೂರ್ ಕುರಿತ ಸಂಸತ್ತಿನ ಚರ್ಚೆಯ ಸಮಯದಲ್ಲಿ ಅವರು ತಮ್ಮ ಭಾಷಣಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಹರಿಹಾಯ್ದಿದ್ದರು. ಶಿವಸೇನಾ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರನ್ನು ಗದರಿಸಿ “ಪ್ರಿಯಾಂಕಾ, ನನ್ನನ್ನು ನಿಯಂತ್ರಿಸಬೇಡಿ” ಎಂದು ಹೇಳಿದ್ದರು.
ನವದೆಹಲಿ, ಆಗಸ್ಟ್ 12: ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ ತಮ್ಮೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ ವ್ಯಕ್ತಿಯನ್ನು ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ (Jaya Bachchan) ತಳ್ಳಿ, ಆತನಿಗೆ ಬೈದಿರುವ ವಿಡಿಯೋ ವೈರಲ್ ಆಗಿದೆ. ಜಯಾ ಬಚ್ಚನ್ ಈ ರೀತಿ ಸಾರ್ವಜನಿಕವಾಗಿ ತಾಳ್ಮೆ ಕಳೆದುಕೊಂಡು ಟ್ರೋಲ್ ಆಗುವುದು ಇದೇ ಮೊದಲೇನಲ್ಲ. ಇದೇ ಕಾರಣಕ್ಕೆ ಅವರು ಆಗಾಗ ಸುದ್ದಿಯಲ್ಲಿರುತ್ತಾರೆ. ಬಿಹಾರದಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಚುನಾವಣಾ ಆಯೋಗದ ಕಚೇರಿಗೆ ವಿರೋಧ ಪಕ್ಷದ ಸಂಸದರು ಮೆರವಣಿಗೆ ನಡೆಸಲು ಸೇರಿದ್ದಾಗ ಓರ್ವ ವ್ಯಕ್ತಿ ಜಯಾ ಬಚ್ಚನ್ ಪಕ್ಕ ನಿಂತು ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಯತ್ನಿಸಿದ್ದಾರೆ. ಇದರಿಂದ ಕೆರಳಿದ ಜಯಾ ಬಚ್ಚನ್ ಆತನನ್ನು ತಳ್ಳಿ, ಗದರಿದ್ದಾರೆ. ಜಯಾ ಬಚ್ಚನ್ಗೆ ದುರಹಂಕಾರ ಎಂದು ಕೆಲವರು ಟೀಕಿಸಿದ್ದರೆ ಇನ್ನು ಕೆಲವರು ಅಂತಹ ಹೆಂಗಸಿನ ಜೊತೆ ಆತ ಯಾಕೆ ಸೆಲ್ಫೀ ತೆಗೆದುಕೊಳ್ಳಬೇಕಿತ್ತು? ಎಂದು ಲೇವಡಿ ಮಾಡಿದ್ದಾರೆ. ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜಯಾ ಬಚ್ಚನ್ ಅವರದ್ದೇ ಸುದ್ದಿ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ