ಡೆಂಕಣಿಕೋಟೆಯಲ್ಲಿ ‘ಕಾಂತಾರ ಗಣಪನ’ ಭಾರಿ ಹವಾ: ಗುಳಿಗ ದೈವ, ಬ್ರಹ್ಮರಾಕ್ಷಸ ನೋಡಲು ರಾಜ್ಯಗಳ ಭಕ್ತರ ದಂಡು
ಕೃಷ್ಣಗಿರಿಯ ಡೆಂಕಣಿಕೋಟೆಯಲ್ಲಿ 'ಕಾಂತಾರ ಚಾಪ್ಟರ್-1' ಕಾನ್ಸೆಪ್ಟ್‌ನ ಅದ್ದೂರಿ ಗಣಪತಿ ಸೆಟ್ ಭಕ್ತರನ್ನು ಆಕರ್ಷಿಸುತ್ತಿದೆ. 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಸೆಟ್, ಸೌಂಡ್ ಹಾಗೂ ಫೈರ್ ಎಫೆಕ್ಟ್‌ಗಳೊಂದಿಗೆ ಕಾಂತಾರ ಸಿನಿಮಾದ ಸನ್ನಿವೇಶಗಳನ್ನು ಜೀವಂತವಾಗಿ ಕಣ್ಮುಂದೆ ತರುತ್ತದೆ. ಗಣೇಶೋತ್ಸವಕ್ಕೆ ಸಿನೆಮಾ ಅನುಭವ ನೀಡುತ್ತಿರುವ ಈ ವಿಶೇಷ ಗಣಪತಿಯ ದರ್ಶನಕ್ಕೆ ಕರ್ನಾಟಕ, ತಮಿಳುನಾಡು ಗಡಿಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ.
ಕೃಷ್ಣಗಿರಿ, ಸೆ.15: ಬ್ಲಾಕ್‌ಬಸ್ಟರ್ ‘ಕಾಂತಾರ’ ಸಿನಿಮಾದ ಕ್ರೇಜ್ ಗಣೇಶೋತ್ಸವಕ್ಕೂ ಆವರಿಸಿದ್ದು, ಕರ್ನಾಟಕ-ತಮಿಳುನಾಡು ಗಡಿಭಾಗದ ಡೆಂಕಣಿಕೋಟೆಯಲ್ಲಿ ‘ಕಾಂತಾರ ಚಾಪ್ಟರ್-1’ ಕಾನ್ಸೆಪ್ಟ್‌ನ ಅದ್ದೂರಿ ಸೆಟ್‌ನಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣಪತಿಯನ್ನು ಕಣ್ತುಂಬಿಕೊಳ್ಳಲು ಭಕ್ತಸಾಗರವೇ ಹರಿದುಬರುತ್ತಿದೆ. ಇಲ್ಲಿನ ಶ್ರೀ ರಾಜಮಾರ್ತಾಂಡ ಗಣಪತಿ ಭಕ್ತ ಮಂಡಳಿ ವತಿಯಿಂದ ಈ ಬಾರಿಯ ಗಣೇಶೋತ್ಸವವನ್ನು ಅತ್ಯಂತ ವಿನೂತನ ಹಾಗೂ ರೋಮಾಂಚನಕಾರಿಯಾಗಿ ಆಯೋಜಿಸಲಾಗಿದೆ. ಈ ಹಿಂದೆ ಬಾಹುಬಲಿ, ಕೆಜಿಎಫ್, ಕಲ್ಕಿ, ಕಾಂತಾರ (ಭಾಗ-1) ಹಾಗೂ ಪುಷ್ಪ ಸಿನಿಮಾಗಳ ಸೆಟ್ ನಿರ್ಮಿಸಿ ಗಮನಸೆಳೆದಿದ್ದ ಪ್ರಸಿದ್ಧ ಆರ್ಟ್ ಡೈರೆಕ್ಟರ್ ತಂಡವೇ ಈ ಬಾರಿಯೂ ಕಾರ್ಯನಿರ್ವಹಿಸಿದೆ. ಬರೋಬ್ಬರಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ, ಸತತ ಎರಡು ತಿಂಗಳುಗಳ ಕಾಲ ಶ್ರಮಿಸಿ ಈ ‘ಕಾಂತಾರ ಚಾಪ್ಟರ್-1’ ಸಿನಿಮಾದ ಶೈಲಿಯ ಸೆಟ್ ಸಿದ್ಧಪಡಿಸಲಾಗಿದೆ. ಸಿನಿಮೀಯ ಅನುಭವ ನೀಡುವ ಸೌಂಡ್ ಎಫೆಕ್ಟ್ ಮತ್ತು ಬೆಂಕಿಯ ಫೈರ್ ಎಫೆಕ್ಟ್‌ಗಳೊಂದಿಗೆ ಪಾತ್ರಗಳ ಸನ್ನಿವೇಶಗಳನ್ನು ಜೀವಂತವಾಗಿ ಕಣ್ಣಮುಂದೆ ತರಲಾಗಿದೆ. ಪೆಂಡಾಲ್ ಪ್ರವೇಶಿಸುತ್ತಿದ್ದಂತೆಯೇ ಭಕ್ತರಿಗೆ ಕಾಂತಾರ ಸಿನಿಮಾದ ಕಥಾ ಲೋಕಕ್ಕೆ ಕಾಲಿಟ್ಟ ಅನುಭವವಾಗುತ್ತದೆ. ಕಾಂತಾರ ದೈವದ ಎಂಟ್ರಿಯೊಂದಿಗೆ ಸೆಟ್‌ಗೆ ಪ್ರವೇಶ ದೊರೆಯಲಿದ್ದು, ಒಳಗೆ ಕಾಂತಾರ ಶಿವನ ದೇವಾಸ್ಥಾನ ನಿರ್ಮಿಸಲಾಗಿದೆ. ಕೈಯಲ್ಲಿ ಬೆಂಕಿಯನ್ನು ಹಿಡಿದು ಗುಳಿಗ ಮತ್ತು ಕಾಂತಾರ ದೈವದ ಆ್ಯಕ್ಷನ್ ಮೂಡ್‌ಗೆ ‘ಫೈರ್ ಫೀಲ್’ ನೀಡಲಾಗಿದೆ. ಮುಂದೆ ಸಾಗುತ್ತಿದ್ದಂತೆ ಕಾಂತಾರ ಕಾಡು, ಬೆಟ್ಟ ಮತ್ತು ಗುಹೆಯ ದೃಶ್ಯಾವಳಿಗಳಿದ್ದು, ರಿಷಬ್ ಶೆಟ್ಟಿ ಚಿಕ್ಕ ಮಗು ಹಾಗೂ ಹುಲಿಯೊಂದಿಗಿನ ಸಾಹಸದ ಸೀಕ್ವೆನ್ಸ್ ಕಾಣಸಿಗುತ್ತದೆ. ಕ್ಲೈಮ್ಯಾಕ್ಸ್ ಮಾದರಿಯಲ್ಲಿ ಬ್ರಹ್ಮರಾಕ್ಷಸ, ಶಿವಲಿಂಗ ಹಾಗೂ ಎಂಟ್ರಿ ನೀಡುವ ರಿಷಬ್ ಶೆಟ್ಟಿ ಪಾತ್ರಗಳ ಜೊತೆಗೆ, ಕೊನೆಯಲ್ಲಿ ಗಣೇಶನು ‘ವರಾಹರೂಪಿ’ ಯಾಗಿ ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ. ತಮಿಳುನಾಡಿನ ಡೆಂಕಣಿಕೋಟೆಯಲ್ಲಿ ನಿರ್ಮಿಸಲಾಗಿರುವ ಈ ಕಾಂತಾರ ಗಣಪತಿಯನ್ನು ಕಣ್ತುಂಬಿಕೊಳ್ಳಲು ಹೊಸೂರು, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕದ ಗಡಿಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಆಗಮಿಸುವ ಪ್ರತಿಯೊಬ್ಬ ಭಕ್ತಾದಿಗಳಿಗೂ ನಿತ್ಯ ಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಲಾಗಿದ್ದು, ಒಟ್ಟು 9 ದಿನಗಳ ಕಾಲ ಈ ಅದ್ದೂರಿ ಕಾಂತಾರ ಗಣಪತಿಯನ್ನು ಭಕ್ತರು ಕಣ್ತುಂಬಿಕೊಳ್ಳಲಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
