ಭೈರತಿ ಸುರೇಶ್ ನೀವು 7 ತಿಂಗಳಿಗೆ ಹುಟ್ಟಿದವರಂತೆ ಆಡ್ಬೇಡಿ: ಸುರೇಶ್ ಕುಮಾರ್ ಮಾತಿಗೆ ಕಲಾಪದಲ್ಲಿ ಭಾರೀ ಗದ್ದಲ

Updated on: Jan 23, 2026 | 2:41 PM

ಕರ್ನಾಟಕ ಅಸೆಂಬ್ಲಿ ಅಧಿವೇಶನದಲ್ಲಿ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರ ಏಳು ತಿಂಗಳಿಗೆ ಹುಟ್ಟಿದವರಂತೆ ಆಡಬೇಡಿ ಎಂಬ ಹೇಳಿಕೆಯು ತೀವ್ರ ವಿವಾದ ಸೃಷ್ಟಿಸಿತು. ಸಚಿವ ಭೈರತಿ ಸುರೇಶ್ ಮತ್ತು ಪ್ರಿಯಾಂಕಾ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹೇಳಿಕೆಯನ್ನು ಕಡತದಿಂದ ತೆಗೆದುಹಾಕಲು ಸೂಚಿಸಿ, ಕ್ಷಮೆಗೆ ಆಗ್ರಹಿಸಿದರು.

ಬೆಂಗಳೂರು, ಜ.23: ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ(Karnataka Assembly) ನಡೆದ ಘಟನೆಯೊಂದು ಸದನದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಏಳು ತಿಂಗಳಿಗೆ ಹುಟ್ಟಿದವರಂತೆ ಆಡಬೇಡಿ ಎಂಬ ಹೇಳಿಕೆಯು ಸದನದಲ್ಲಿ ಗದ್ದಲಕ್ಕೆ ಕಾರಣವಾಗಿದೆ. ಈ ಹೇಳಿಕೆಗೆ ಸಚಿವ ಭೈರತಿ ಸುರೇಶ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುರೇಶ್ ಕುಮಾರ್ ಮಾತನಾಡುತ್ತಿದ್ದಾಗ ಭೈರತಿ ಸುರೇಶ್ ಮಧ್ಯಪ್ರವೇಶಿಸಿದ್ದರೆ ಈ ವೇಳೆ ಸುರೇಶ್ ಕುಮಾರ್ “ಒಂಭತ್ತು ತಿಂಗಳಿಗೆ ಹುಟ್ಟಿದ್ರೆ ಸರಿಯಾಗುತ್ತಿತ್ತು, ಏಳು ತಿಂಗಳಿಗೆ ಹುಟ್ಟಿದ್ದೀರಾ” ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಸುರೇಶ್ ಕುಮಾರ್ ಅವರ ಈ ಮಾತು ಸದನದಲ್ಲಿ ಆಕ್ರೋಶದ ಅಲೆಯ್ನುಎಬ್ಬಿಸಿದೆ. ಹಲವಾರು ಸದಸ್ಯರು, ಅದರಲ್ಲಿಯೂ ಪ್ರಿಯಾಂಕಾ ಮತ್ತು ಭೈರತಿ ಸುರೇಶ್ ಅವರು ತೀವ್ರವಾಗಿ ವಿರೋಧಿಸಿ, ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಕೂಡಲೇ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. ಈ ಹೇಳಿಕೆ ಅನ್ ಪಾರ್ಲಿಮೆಂಟರಿ (ಅಸಂಸದೀಯ) ಎಂದು ಹಲವರು ವಾದಿಸಿದರು. “ನೀವು ಹೆಲ್ತ್ ಮಿನಿಸ್ಟರ್ ಆಗಿದ್ದೀರಾ. ಏಳು ತಿಂಗಳಲ್ಲಿ ಯಾರೂ ಹುಟ್ಟೋದೇ ಇಲ್ವಾ? ಪ್ರೀ ಮೆಚ್ಯೂರ್ ಬೇಬಿ ಹುಟ್ಟಲ್ವಾ? ಏಳು ತಿಂಗಳಲ್ಲಿ ಹುಟ್ಟೋರಿಗೆ ಮಾನ ಮರ್ಯಾದೆ ಇಲ್ವಾ?” ಸದನದಲ್ಲಿ ಶಾಸಕರೊಬ್ಬರು ಹೇಳಿದ್ದಾರೆ. ಈ ಮಾತಿನಿಂದ ಏಳು ತಿಂಗಳಲ್ಲಿ ಜನಿಸಿದವರ ಕುರಿತು ಅಪಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಈ ವಾಗ್ವಾದ ತಾರಕಕ್ಕೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಿ, ಸುರೇಶ್ ಕುಮಾರ್ ಅವರ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ಅವರು ಹೇಳಿದ ಮಾತನ್ನು ಕಡತದಿಂದ ತೆಗೆದುಹಾಕಿ ಎಂದು ಸ್ಪೀಕರ್​​​ಗೆ ಹೇಳಿದ್ರು, ತಕ್ಷಣ ಎದ್ದು ನಿಂತು ಸುರೇಶ್ ಕುಮಾರ್ ಅವರು ತಾವು ಏಳು ತಿಂಗಳು, ಒಂಬತ್ತು ತಿಂಗಳು ಎಂದು ಹೇಳಿದ ಮಾತನ್ನು ವಾಪಸ್ ತೆಗೆದುಕೊಳ್ಳುವುದಾಗಿ ಹೇಳಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ