‘ಲತಾ ಮಂಗೇಶ್ಕರ್ ಅವರ ಆ ಹಾಡು ಕೇಳಿದ್ರೆ ಈಗಲೂ ಕಣ್ಣೀರು ಬರುತ್ತೆ’: ಬಸವರಾಜ ಬೊಮ್ಮಾಯಿ
‘ನಾವೆಲ್ಲ ಲತಾ ಮಂಗೇಶ್ಕರ್ ಅವರ ಹಾಡನ್ನು ಕೇಳಿಕೊಂಡು ಬೆಳೆದವರು. ಭಾರತದ ಒಂದಿಲ್ಲೊಂದು ಕಡೆ ಅವರ ಹಾಡು ಸದಾ ಕೇಳಿಸುತ್ತಲೇ ಇರುತ್ತದೆ’ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನದ (Lata Mangeshkar Death) ಸುದ್ದಿ ಕೇಳಿ ಇಡೀ ದೇಶಕ್ಕೆ ನೋವಾಗಿದೆ. ಅನೇಕ ಗಣ್ಯರು ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಸೇರಿದಂತೆ ರಾಜಕೀಯ ಕ್ಷೇತ್ರದ ಹಲವರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಲತಾ ಮಂಗೇಶ್ಕರ್ (Lata Mangeshkar) ಅವರ ಕೊಡುಗೆಯನ್ನು ಸ್ಮರಿಸಿದ್ದಾರೆ. ‘ಅವರ ಹಾಡುಗಳು ಕೇವಲ ಸಿನಿಮಾಗೆ ಸೀಮಿತವಾಗಿ ಇರಲಿಲ್ಲ. ಭಜನೆಗಳು, ದೇಶಭಕ್ತಿ ಗೀತೆಗಳ ಮೂಲಕ ಅವರು ಗಮನ ಸೆಳೆದಿದ್ದರು. ‘ಯೇ ಮೇರೆ ವತನ್ ಕೆ ಲೋಗೋ..’ ಹಾಡನ್ನು ಕೇಳಿದರೆ ಇಂದಿಗೂ ಕಣ್ಣೀರು ಬರುತ್ತದೆ. ದೇಶಭಕ್ತಿ ಉಕ್ಕಿ ಹರಿಯುತ್ತದೆ. ಅಷ್ಟು ಪ್ರೇರಣಾದಾಯಕವಾಗಿ ಅವರು ಅದನ್ನು ಹಾಡಿದ್ದರು. ಎಲ್ಲಿಯವರೆಗೆ ಈ ಭೂಮಿ ಮೇಲೆ ಸಂಗೀತ ಇರುತ್ತದೆಯೋ ಅಲ್ಲಿಯವರೆಗೆ ಲತಾ ಮಂಗೇಶ್ಕರ್ ಅವರು ಎಲ್ಲರ ಮನಸ್ಸಿನಲ್ಲಿ ಸ್ಥಾನ ಹೊಂದಿರುತ್ತಾರೆ. ಅವರ ಹೆಸರು ಚಿರಸ್ಥಾಯಿ ಆಗಿರುತ್ತದೆ. ನಾವೆಲ್ಲ ಅವರ ಹಾಡನ್ನು ಕೇಳಿಕೊಂಡು ಬೆಳೆದವರು. ಭಾರತದ ಒಂದಿಲ್ಲೊಂದು ಕಡೆ ಅವರ ಹಾಡು ಸದಾ ಕೇಳಿಸುತ್ತಲೇ ಇರುತ್ತದೆ. ನಮ್ಮ ಭಾರತದ ಕೋಗಿಲೆ ಇವತ್ತು ಹಾಡನ್ನು ನಿಲ್ಲಿಸಿರುವುದು ತೀವ್ರ ನೋವಿನ ಸಂಗತಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ’ ಎಂದು ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ಇಂದು (ಫೆ.6) ಸಂಜೆ ಮುಂಬೈನ ಶಿವಾಜಿ ಪಾರ್ಕ್ನಲ್ಲಿ ಲತಾ ಮಂಗೇಶ್ಕರ್ ಅಂತ್ಯಕ್ರಿಯೆ ನಡೆಯಲಿದೆ.
ಇದನ್ನೂ ಓದಿ:
Lata Mangeshkar Death: ಲತಾ ಮಂಗೇಶ್ಕರ್ ಅತಿ ಅಪರೂಪದ ಫೋಟೋ ಗ್ಯಾಲರಿ; ಲೆಜೆಂಡರಿ ಗಾಯಕಿಗೆ ಚಿತ್ರ ನಮನ
‘ಬೆಳ್ಳನೆ ಬೆಳಗಾಯಿತು..’ ಎಂದು ಕನ್ನಡಿಗರ ಮನ ಗೆದ್ದಿದ್ದ ಲತಾ ಮಂಗೇಶ್ಕರ್; ಇಲ್ಲಿದೆ ಅವರ ಕನ್ನಡ ಗೀತೆ ಬಗ್ಗೆ ವಿವರ