ದಸರಾ, ದೀಪಾವಳಿ: ರಾಜ್ಯಾದ್ಯಂತ ಸಿಹಿ ತಿಂಡಿ ಅಂಗಡಿಗಳ ಮೇಲೆ ಎಫ್ಎಸ್ಎಸ್ಎಐ ದಾಳಿ, ನಿಯಮ ಉಲ್ಲಂಘಿಸಿದ್ರೆ ಪರವಾನಗಿ ರದ್ದು
ದಸರಾ, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಿಹಿ ತಿಂಡಿಗಳ ಗುಣಮಟ್ಟ ಖಚಿತಪಡಿಸಿಕೊಳ್ಳಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ರಾಜ್ಯಾದ್ಯಂತ ವಿಶೇಷ ಕಾರ್ಯಾಚರಣೆ ಆರಂಭಿಸಿದೆ. ಸಚಿವ ಯು.ಟಿ. ಖಾದರ್ ಸೂಚನೆಯಂತೆ ಸ್ವೀಟ್ಸ್ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ, ಅವಧಿ ಮೀರಿದ ಅಥವಾ ಕಳಪೆ ಗುಣಮಟ್ಟದ ಆಹಾರ ಪತ್ತೆಯಾದರೆ ತಕ್ಷಣವೇ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರು, ಅಕ್ಟೋಬರ್ 15: ದಸರಾ ಹಬ್ಬದ ಸಂಭ್ರಮ ಒಂದೆಡೆಯಾದರೆ ಅದರ ಬೆನ್ನಲ್ಲೇ ದೀಪಾವಳಿ ಹಬ್ಬದ ಸಡಗರವೂ ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಸಿಹಿ ತಿಂಡಿಗಳ ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ರಾಜ್ಯಾದ್ಯಂತ ಸಿಹಿ ತಿಂಡಿ ತಯಾರಿಕಾ ಘಟಕಗಳ ಮೇಲೆ ವಿಶೇಷ ದಾಳಿ ನಡೆಸುತ್ತಿದೆ. ಸಚಿವ ಯು.ಟಿ. ಖಾದರ್ ಅವರ ನಿರ್ದೇಶನದ ಮೇರೆಗೆ ಈ ಕಾರ್ಯಾಚರಣೆ ಆರಂಭಗೊಂಡಿದ್ದು, ದೀಪಾವಳಿ ಹಬ್ಬದವರೆಗೂ ಈ ನಿಗಾ ಮುಂದುವರಿಯಲಿದೆ. ಎಫ್ಎಸ್ಎಸ್ಎಐ ಅಧಿಕಾರಿಗಳು ಏಕಕಾಲಕ್ಕೆ ರಾಜ್ಯದಾದ್ಯಂತ ದಾಳಿ ನಡೆಸಿ, ಸ್ವಚ್ಛತೆ, ಗುಣಮಟ್ಟ ಮತ್ತು ಆಹಾರ ಪದಾರ್ಥಗಳ ಅವಧಿ ಪರಿಶೀಲನೆ ನಡೆಸುತ್ತಿದ್ದಾರೆ.
ಯಾವುದೇ ತಯಾರಿಕಾ ಘಟಕದಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳು, ಕಳಪೆ ಗುಣಮಟ್ಟದ ಉತ್ಪನ್ನಗಳು ಅಥವಾ ಸ್ವಚ್ಛತೆಯ ಕೊರತೆ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿಯಮ ಉಲ್ಲಂಘನೆ ಮಾಡುವ ಘಟಕಗಳ ಪರವಾನಗಿಯನ್ನು ಸ್ಥಳದಲ್ಲೇ ರದ್ದುಗೊಳಿಸಲಾಗುವುದು ಎಂದು ಸಚಿವ ಯು.ಟಿ. ಖಾದರ್ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರ ಆರೋಗ್ಯ ರಕ್ಷಣೆ ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ಕಲಬೆರಕೆ ಮತ್ತು ಕಳಪೆ ಆಹಾರ ತಯಾರಿಕೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ತಿಳಿಸಿದ್ದಾರೆ. ಈ ಕ್ರಮವು ಹಬ್ಬದ ಸಮಯದಲ್ಲಿ ಗ್ರಾಹಕರಿಗೆ ಸುರಕ್ಷಿತ ಸಿಹಿ ತಿಂಡಿಗಳು ಲಭ್ಯವಾಗುವುದನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
