ಬಿಜೆಪಿ ಜೆಡಿಎಸ್ ಪಾದಯಾತ್ರೆ ಬಗ್ಗೆ ಕಡ್ಡಿ ಮುರಿದಂತೆ ಮಾತನಾಡಿದ ಪರಮೇಶ್ವರ್
ಸಿಎಂ ಸಿದ್ದರಾಮಯ್ಯರನ್ನು ಮುಡಾ ಬದಲಿ ಸೈಟ್ ಗೋಲ್ ಮಾಲ್ ಪ್ರಕರಣ ಇಕ್ಕಟ್ಟಿಗೆ ಸಿಲುಕಿಸಿದೆ. ಸದನದಲ್ಲಿ ತೀವ್ರ ಹೋರಾಟ ಮಾಡಿದ್ದ ಬಿಜೆಪಿ ಜೆಡಿಎಸ್ ನಾಯಕರು ಈಗ ಮೈಸೂರು ಚಲೋ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಆಗಸ್ಟ್ ಮೂರನೇ ತಾರೀಖಿನಿಂದ ಬೃಹತ್ ಪಾದಯಾತ್ರೆಗೆ ರೂಪುರೇಷೆ ತಯಾರಿ ಮಾಡಿಕೊಂಡಿದ್ದಾರೆ. ಆದರೆ, ಇದಕ್ಕೆ ಅವಕಾಶ ನೀಡುವ ಬಗ್ಗೆ ಗೃಹ ಸಚಿವ ಪರಮೇಶ್ವರ ಹೇಳಿದ್ದೇನು ನೋಡಿ.
ಬೆಂಗಳೂರು, ಜುಲೈ 29: ಸಿಎಂ ಸಿದ್ದರಾಮಯ್ಯನವರ ಪತ್ನಿಗೆ ಅಕ್ರಮವಾಗಿ 14 ಮುಡಾ ಬದಲಿ ನಿವೇಶನಗಳನ್ನು ನೀಡಲಾಗಿದೆ ಎಂದು ಬಿಜೆಪಿ, ಜೆಡಿಎಸ್ ಆರೋಪಿಸಿದ್ದು, ಪ್ರತಿಭಟನೆ ನಡೆಸುತ್ತಿವೆ. ಅಧಿವೇಶನದಲ್ಲಿ ಸಿಎಂ ವಿರುದ್ಧ ತೀವ್ರ ಹೋರಾಟ ನಡೆಸಿದ್ದ ದೋಸ್ತಿ ನಾಯಕರು ಒಂದು ದಿನ ಅಹೋರಾತ್ರಿ ಧರಣಿಯನ್ನೂ ನಡೆಸಿದ್ದರು. ಸಿಬಿಐ ತನಿಖೆ ಹಾಗೂ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಪಟ್ಟುಹಿಡಿದಿದ್ದರು. ಈಗ ಬೆಂಗಳೂರಿನಿಂದ ಮೈಸೂರುವರೆಗೆ ಬೃಹತ್ ಪಾದಯಾತ್ರೆಗೆ ಪ್ಲ್ಯಾನ್ ಮಾಡಿದ್ದಾರೆ. ಆದರೆ, ಇದಕ್ಕೆ ಅನುಮತಿ ನೀಡುವುದಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ ಹೇಳಿದ್ದಾರೆ.
ಪಾದಯಾತ್ರೆಗೆ ನಾವು ಅವಕಾಶ ನೀಡುವುದಿಲ್ಲ. ಅವರು ಮಾಡುವುದಿದ್ದರೆ ಮಾಡಿಕೊಳ್ಳಲಿ, ಅದರ ಬಗ್ಗೆ ನಮ್ಮ ತಕರಾರಿಲ್ಲ. ಆದರೆ, ಅಧಿಕೃತವಾಗಿ ಪೊಲೀಸ್ ಇಲಾಖೆಯಿಂದ ನಾವು ಅನುಮತಿ ನೀಡುವುದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ.
ಇದನ್ನೂ ಓದಿ: ಸಚಿವ ಸಂಪುಟಕ್ಕೆ ಆಗಲಿದೆಯಾ ಸರ್ಜರಿ? ನಾಳೆ ಸಿಎಂ, ಡಿಸಿಎಂ ದೆಹಲಿ ಪ್ರವಾಸ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ಕೆಲವು ಕಂಪನಿಗಳು ಹೂಡಿಕೆಯಿಂದ ಹಿಂದೆ ಸರಿಯುತ್ತಿವೆ ಎಂಬ ಆರೋಪಗಳನ್ನು ಅವರು ಅಲ್ಲಗಳೆದಿದ್ದಾರೆ. ಕಂಪನಿಗಳು ಅವುಗಳದ್ದೇ ಆದ ಕೆಲವು ಮಾನದಂಡಗಳನ್ನಿಟ್ಟುಕೊಂಡು ಎಲ್ಲಿ ಹೂಡಿಕೆ ಮಾಡಬೇಕೆಂದು ತೀರ್ಮಾನ ಕೈಗೊಳ್ಳುತ್ತವೆ. 2-3 ಆಯ್ಕೆಗಳನ್ನು ಇಟ್ಟುಕೊಂಡಿರುತ್ತವೆ. ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಹೀಗೆ ಕೆಲವು ಆಯ್ಕೆಗಳು ಅವುಗಳ ಮುಂದಿರುತ್ತವೆ. ಮಾನದಂಡಗಳಿಗೆ ಅನುಗುಣವಾಗಿ ಅವರು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಪರಮೇಶ್ವರ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ