ಡಿಕೆಶಿ ಬಣಕ್ಕೆ ಮೇ ಕ್ರಾಂತಿ ಕನಸು: ದೆಹಲಿಯಲ್ಲಿ ಸಿದ್ದರಾಮಯ್ಯ ಬಣ ಅಹಿಂದ ಕಾರ್ಡ್​ ಪ್ಲೇ!

Edited By:

Updated on: Apr 29, 2026 | 9:37 AM

ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕಲಹ ಮುಂದುವರಿದಿದೆ. ಈಮಧ್ಯೆ ಸಿಎಂ ಸಿದ್ದರಾಮಯ್ಯ ಬಣ ದೆಹಲಿಯಲ್ಲಿ ಅಹಿಂದ ಅಸ್ತ್ರ ಪ್ರಯೋಗಿಸಿದ್ದು, ಸತೀಶ್ ಜಾರಕಿಹೊಳಿ ಮತ್ತು ಹೆಚ್.ಸಿ. ಮಹದೇವಪ್ಪ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದಾರೆ. ದಲಿತ ಮುಖ್ಯಮಂತ್ರಿ ಕೂಗಿಗೆ ತಾವು ಬದ್ಧವೆಂದು ರಾಜಣ್ಣ ಸ್ಪಷ್ಟಪಡಿಸಿದ್ದಾರೆ. ಡಿಕೆ ಶಿವಕುಮಾರ್ ಬಣ ಮೇ ತಿಂಗಳಲ್ಲಿ ಶುಭಸುದ್ದಿಯ ನಿರೀಕ್ಷೆಯಲ್ಲಿದೆ. ಅಹಿಂದ ನಾಯಕರು ತಮ್ಮ ಸ್ಥಾನಮಾನಗಳ ಕುರಿತು ಸ್ಪಷ್ಟತೆ ಬಯಸಿ ದೆಹಲಿಗೆ ತೆರಳಿದ್ದಾರೆ.

ಬೆಂಗಳೂರು, ಏಪ್ರಿಲ್ 29: ಕರ್ನಾಟಕ ಕಾಂಗ್ರೆಸ್ ರಾಜಕಾರಣದಲ್ಲಿ ಮುಖ್ಯಮಂತ್ರಿ ಸ್ಥಾನದ ಕುರಿತಾದ ಗೊಂದಲಗಳು ಮತ್ತೆ ತಾರಕಕ್ಕೇರಿವೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬಣಗಳ ನಡುವೆ ಅಧಿಕಾರಕ್ಕಾಗಿ ಪೈಪೋಟಿ ಜೋರಾಗಿದೆ. ಸಿದ್ದರಾಮಯ್ಯ ಬಣದಿಂದ ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಹೆಚ್.ಸಿ. ಮಹದೇವಪ್ಪ ದೆಹಲಿಗೆ ತೆರಳಿ ಹೈಕಮಾಂಡ್‌ ಎದುರು ಅಹಿಂದ ಕಾರ್ಡ್‌ ಅಸ್ತ್ರ ಪ್ರಯೋಗಿಸಿದ್ದಾರೆ. ದಲಿತ ಮುಖ್ಯಮಂತ್ರಿ ಹುದ್ದೆಯ ಬೇಡಿಕೆಯನ್ನೂ ಇವರು ಮುಂದಿಟ್ಟಿದ್ದಾರೆ. ಮತ್ತೊಂದೆಡೆ, ಡಿಕೆ ಶಿವಕುಮಾರ್ ಬಣ ಮೇ ತಿಂಗಳಲ್ಲಿ ಮುಖ್ಯಮಂತ್ರಿ ಬದಲಾವಣೆಯ ಶುಭಸುದ್ದಿಯ ನಿರೀಕ್ಷೆಯಲ್ಲಿದೆ.

ಸಿದ್ದರಾಮಯ್ಯ ಮೌನದಿಂದ ಆತಂಕಗೊಂಡಿರುವ ಅಹಿಂದ ನಾಯಕರು ತಮ್ಮ ರಾಜಕೀಯ ಭವಿಷ್ಯ ಮತ್ತು ಸ್ಥಾನಮಾನಗಳ ಬಗ್ಗೆ ಸ್ಪಷ್ಟತೆ ಪಡೆಯಲು ದೆಹಲಿಗೆ ಧಾವಿಸಿದ್ದಾರೆ. ಅಹಿಂದ ಹೋರಾಟ ಆರಂಭವಾಗಿ 25 ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ, ಅಹಿಂದ ನಾಯಕರನ್ನು ಬಿಟ್ಟು ಯಾವುದೇ ನಿರ್ಣಯ ತೆಗೆದುಕೊಳ್ಳುವುದು ಸಾಧ್ಯವಿಲ್ಲ ಎಂದು ಸತೀಶ್ ಜಾರಕಿಹೊಳಿ ಮತ್ತು ಮಹದೇವಪ್ಪ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ಕಾಂಗ್ರೆಸ್ ಹಿರಿಯ ನಾಯಕ ರಾಜಣ್ಣ, ಸಿದ್ದರಾಮಯ್ಯ ನಂತರ ದಲಿತ ಮುಖ್ಯಮಂತ್ರಿ ಕೂಗಿಗೆ ತಾವು ಬದ್ಧವಾಗಿರುವುದಾಗಿ ಹೇಳಿದ್ದಾರೆ. ಹೈಕಮಾಂಡ್ ನಿರ್ದೇಶನಕ್ಕೆ ಸಿದ್ದರಾಮಯ್ಯ ಬದ್ಧರಾಗಿದ್ದು, ಅಧಿಕಾರ ತ್ಯಾಗ ಮಾಡಲೂ ಸಿದ್ಧರಿದ್ದಾರೆ ಎಂದು ರಾಜಣ್ಣ ತಿಳಿಸಿದ್ದಾರೆ. ಒಟ್ಟಾರೆ, ಮೇ ತಿಂಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುವ ನಿರೀಕ್ಷೆಗಳಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Prasanna Gaonkar

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More