ಬಿಜೆಪಿ ಶಾಸಕರು ಕೂಡ ನಮಸ್ಕಾರ ಸ್ಪೀಕರ್ ಸಾಬ್ ಎನ್ನುತ್ತಾರೆ: ತೆಲಂಗಾಣದಲ್ಲಿ ಜಮೀರ್ ಅಬ್ಬರದ ಭಾಷಣ
ತೆಲಂಗಾಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಭರ್ಜರಿ ಕ್ಯಾಂಪೇನ್ ಮಾಡುತ್ತಿರುವ ಜಮೀರ್ ಅಹಮ್ಮದ್ ಖಾನ್, ಹೈದರಾಬಾದ್ನಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ರಾಜ್ಯ ಕಾಂಗ್ರೆಸ್ನಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಿರುವ ಸ್ಥಾನಮಾನಗಳನ್ನು ಒತ್ತಿ ಒತ್ತಿ ಹೇಳಿದ್ದಾರೆ.
ಹೈದರಾಬಾದ್, (ನವೆಂಬರ್ 17): ಕರ್ನಾಟಕದ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ತೆಲಂಗಾಣ ವಿಧಾನಸಭಾ ಚುನಾವಣೆಯ ಅಖಾಡಕ್ಕಿಳಿದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಪರ ಭರ್ಜರಿ ಕ್ಯಾಂಪೇನ್ ಮಾಡುತ್ತಿರುವ ಜಮೀರ್ ಅಹಮ್ಮದ್ ಖಾನ್, ಹೈದರಾಬಾದ್ನಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ರಾಜ್ಯ ಕಾಂಗ್ರೆಸ್ನಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಿರುವ ಸ್ಥಾನಮಾನಗಳನ್ನು ಒತ್ತಿ ಒತ್ತಿ ಹೇಳಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ನಿಂದ 9 ಮುಸ್ಲಿಮರು ಗೆದ್ದಿದ್ದಾರೆ. 9 ಮುಸ್ಲಿಂ ಶಾಸಕರ ಪೈಕಿ 5 ಶಾಸಕರಿಗೆ ಅಧಿಕಾರ ನೀಡಿದೆ. ನನ್ನನ್ನು ಸಚಿವನಾಗಿ ಮಾಡಿದೆ. ಅಲ್ಲದೇ ರಹೀಂ ಖಾನ್ ಸಹ ಮಂತ್ರಿ ಆಗಿದ್ದಾರೆ. ಸಲೀಂ ಅಹಮದ್ ಅವರನ್ನು ಮುಖ್ಯ ಸಚೇತಕರಾಗಿ ಮಾಡಲಾಗಿದೆ. ನಜೀರ್ ಅಹಮದ್ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದಾರೆ. ಇನ್ನು ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಯಾವ ಮುಸ್ಲಿಂ ಸ್ಪೀಕರ್ ಆಗಿರಲಿಲ್ಲ. ಯು.ಟಿ.ಖಾದರ್ ಅವರನ್ನು ವಿಧಾನಸಭಾ ಸ್ಪೀಕರ್ ಆಗಿ ನೇಮಿಸಲಾಗಿದೆ. ಈಗ ಬಿಜೆಪಿ ಶಾಸಕರು ಕೂಡ ನಮಸ್ಕಾರ ಸ್ಪೀಕರ್ ಸಾಬ್ ಎನ್ನುತ್ತಾರೆ ಎಂದು ತೆಲಂಗಾಣ ಚುನಾವಣಾ ಪ್ರಚಾರದಲ್ಲಿ ಜಮೀರ್ ಅಬ್ಬರದ ಭಾಷಣ ಮಾಡಿ ಗಮನ ಸೆಳೆದಿದ್ದಾರೆ.