ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ: ವಯೋಮಿತಿ ಸಡಿಲಿಕೆ ಬಗ್ಗೆ ಸುಳಿವು ಕೊಟ್ಟ ಗೃಹ ಸಚಿವ ಪರಮೇಶ್ವರ್
ಕರ್ನಾಟಕದ ಗೃಹ ಸಚಿವ ಪರಮೇಶ್ವರ್ ಅವರು ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ ಮಾಡುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ. ಹಲವು ವರ್ಷಗಳಿಂದ ಕಾನ್ಸ್ಟೇಬಲ್ ನೇಮಕಾತಿ ಆಗದಿರುವುದರಿಂದ ಈ ಬೇಡಿಕೆ ಬಂದಿದೆ. ವಿವಿಧ ರಾಜ್ಯಗಳ ನೀತಿಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 12: ಪೊಲೀಸ್ ಕಾನ್ಸ್ಟೇಬಲ್ ಆಕಾಂಕ್ಷಿಗಳಿಗೆ ಶೀಘ್ರದಲ್ಲೇ ಶುಭ ಸುದ್ದಿ ನೀಡುವ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ ಸುಳಿವು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ನಡೆದಿಲ್ಲದ ಕಾರಣ, ಯುವಜನರಲ್ಲಿ ಈ ಬಗ್ಗೆ ಬಹಳಷ್ಟು ಆಕ್ರೋಶವಿತ್ತು. ಈ ಹಿನ್ನೆಲೆಯಲ್ಲಿ, ವಯೋಮಿತಿಯನ್ನು ಸಡಿಲಿಸುವ ಬಗ್ಗೆ ಪರಿಶೀಲಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಬೇರೆ ರಾಜ್ಯಗಳಲ್ಲಿರುವ ವಯೋಮಿತಿ ನೀತಿಗಳನ್ನು ಅಧ್ಯಯನ ಮಾಡಿ, ಸೂಕ್ತವಾದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಪ್ರಸ್ತಾವನೆ ಸರ್ಕಾರದ ಅನುಮೋದನೆ ಪಡೆದ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

