ವಿಜಯ್ ಅವರನ್ನು ಬಂಧಿಸುತ್ತೀರಾ?; ಸಿಎಂ ಸ್ಟಾಲಿನ್ ನೀಡಿದ ಉತ್ತರ ಇಲ್ಲಿದೆ
ಕರೂರ್ ಕಾಲ್ತುಳಿತದ ಸಂತ್ರಸ್ತರಿಗೆ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಗೌರವ ಸಲ್ಲಿಸಿದ್ದಾರೆ. ಗಾಯಾಳುಗಳನ್ನು ಭೇಟಿ ಮಾಡಲು ಆಸ್ಪತ್ರೆಗೆ ಭೇಟಿ ನೀಡಿದರು. ಸ್ಟಾಲಿನ್ ಅವರ ಪ್ರಕಾರ, ನಿನ್ನೆ ಟಿವಿಕೆ (ತಮಿಳಗ ವೆಟ್ರಿ ಕಳಗಂ) ಮುಖ್ಯಸ್ಥ ಮತ್ತು ನಟ ವಿಜಯ್ ಅವರ ಸಾರ್ವಜನಿಕ ಕಾರ್ಯಕ್ರಮದಲ್ಲಿ ನಡೆದ ಕಾಲ್ತುಳಿತದ ಘಟನೆಯಲ್ಲಿ ಇದುವರೆಗೆ 39 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಕರೂರ್, ಸೆಪ್ಟೆಂಬರ್ 28: ತಮಿಳುನಾಡಿನ ಕರೂರಿನಲ್ಲಿ ಕಾಲ್ತುಳಿತದಿಂದ 9 ಮಕ್ಕಳು ಸೇರಿದಂತೆ 39 ಜನರು ಮೃತಪಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ವಿಜಯ್ ಅವರನ್ನು ಅರೆಸ್ಟ್ ಮಾಡಬೇಕೆಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನಗಳು ಶುರುವಾಗಿವೆ. ನಿನ್ನೆ ರಾತ್ರಿಯೇ ತುರ್ತಾಗಿ ಕರೂರ್ಗೆ ಆಗಮಿಸಿದ ಸಿಎಂ ಸ್ಟಾಲಿನ್ (MK Stalin) ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಹಾಗೇ, ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ವಿಜಯ್ ಅವರನ್ನು ಅರೆಸ್ಟ್ ಮಾಡುತ್ತೀರಾ? ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ ಸ್ಟಾಲಿನ್, ನಾನು ನಿಮ್ಮ ಪ್ರಶ್ನೆಗೆ ರಾಜಕೀಯವಾಗಿ ಉತ್ತರಿಸಲು ಸಾಧ್ಯವಿಲ್ಲ. ಇಷ್ಟು ಜನರ ಸಾವು ನನ್ನನ್ನು ಕುಗ್ಗಿಸಿದೆ. ಈ ರಾಜ್ಯದ ಮುಖ್ಯಮಂತ್ರಿಯಾಗಿ ಈ ಪ್ರಕರಣದ ತನಿಖೆಗೆ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಾದ ಅರುಣಾ ಜಗತೀಸನ್ ನೇತೃತ್ವದ ಏಕವ್ಯಕ್ತಿ ಆಯೋಗ ರಚಿಸಲಾಗಿದೆ. ಆ ಆಯೋಗದ ವರದಿಯನ್ನು ಆಧರಿಸಿ ಸಂಭಾವ್ಯ ಬಂಧನ ಸೇರಿದಂತೆ ಯಾವುದೇ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ. ರಾಜಕೀಯ ಸಭೆಯಲ್ಲಿ ಇಂತಹ ದುರಂತ ಅಭೂತಪೂರ್ವವಾಗಿದ್ದು, ಇದು ಎಂದಿಗೂ ಮರುಕಳಿಸಬಾರದು ಎಂದು ಅವರು ಮಾಧ್ಯಮಗಳನ್ನು ಉದ್ದೇಶಿಸಿ ಭಾವುಕರಾಗಿ ಮಾತನಾಡಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

