Lady Snooker Champ: ದೇಶಕ್ಕೆ ಚಿನ್ನದ ಕೊಡುಗೆ ನೀಡಿರುವ ಕೆಜಿಎಫ್ಗೆ, ದೂರದ ರಿಯಾದ್ನಿಂದ ಮತ್ತಷ್ಟು ಚಿನ್ನದ ‘ಕೀರ್ತಿ‘ ತಂದುಕೊಟ್ಟ ಸ್ನೂಕರ್ ಯುವತಿ!
KGF Keerthana Pandian in Riyadh: 21 ವರ್ಷದ ಕೀರ್ತನಾ ಪಾಂಡಿಯನ್ ಕಳೆದ 17ನೇ ತಾರೀಕಿನಂದು ಸೌದಿ ಅರೇಬಿಯಾದಲ್ಲಿರುವ ರಿಯಾದ್ ನಗರ ದಲ್ಲಿ ನಡೆದ ಸ್ನೂಕರ್ ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದು ತನ್ನ ದೇಶ, ರಾಜ್ಯ, ಕೋಲಾರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಚಿನ್ನದ ನಾಡು ಕೋಲಾರದ ಯುವಕರ ಸಾಧನೆಗೆ ಯಾವುದೇ ಕ್ಷೇತ್ರ ಬಾಕಿ ಇಲ್ಲ, ಕಡೆಗಣಿಸಿದ ಜಿಲ್ಲೆಯಾದರೂ ಇಲ್ಲಿಯ ಯುವಕ ಯುವತಿಯರಿಗೆ ಬರುವ ಕಿಚ್ಚು ಕಡಿಮೆ ಇಲ್ಲ. ಕ್ರೀಡಾ ಕ್ಷೇತ್ರದಲ್ಲಿ ಸಹ ಕೋಲಾರದ ಸಾಧನೆ ಬಹಳಷ್ಟು ಇದೆ. ಈಗ ಭಾರತ ದೇಶ, ಕರ್ನಾಟಕ ರಾಜ್ಯ ಮತ್ತು ಕೋಲಾರ ಜಿಲ್ಲೆಯವರು ಹಾಗು ಹೆಮ್ಮೆ ಪಡಬಹುದಾದ ಕಿರೀಟವೊಂದು ದಕ್ಕಿದೆ. ಯಾವುದು ಆ ಕಿರೀಟ ಅಂದುಕೊಂಡ್ರ ಇಲ್ಲಿದೆ ನೋಡಿ ಒಂದು ರಿಪೋರ್ಟ್.. ಚಿನ್ನದನಾಡಿನ (gold) ಯುವಜನತೆಗೆ ಸಾಧನೆಯ ಮೆಟ್ಟಿಲು ಕಠಿಣವಾದರೂ ಬಿಡದ ಛಲವಿದೆ. ಹಾಗಾಗಿಯೇ ಈ ಯುವತಿ ಸ್ನೂಕರ್ ನಲ್ಲಿ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಾ ಸಾಗಿದ್ದಾಳೆ. ಅಂಡರ್ 16 ಶ್ರೇಣಿಯಲ್ಲಿ ಬೆಳ್ಳಿ, ಅಂಡರ್ 18 ರಲ್ಲಿ ಕಂಚು, ಇದೀಗ ಅಂಡರ್ 21 ನಲ್ಲಿ ವಿಶ್ವ ಸ್ನೂಕರ್ ಚಾಂಪಿಯನ್. ಹೌದು ಸ್ನೂಕರ್ (snooker) ಬೋರ್ಡ್ ಕ್ಯೂ ಹಿಡಿದು ಮುಂದೆ ಗುರಿ ಇಟ್ಟು ಸ್ನೂಕ್ ಮಾಡುತ್ತಿರುವ ಇವರ ಹೆಸರು ಕೀರ್ತನಾ ಪಾಂಡಿಯನ್ (Keerthana Pandian). ಕೋಲಾರದ ಕೆಜಿಎಫ್ ನ ಬೆಮೆಲ್ ನಗರದ ನಿವಾಸಿಗಳಾದ ಪಾಂಡಿಯನ್-ಜಯಲಕ್ಷ್ಮಿ ಪುತ್ರಿ. ಕೆಜಿಎಫ್ (KGF) ನಗರದ ಜೈನ್ಸ್ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿನಿ.
ತೆರೆಮರೆಯಲ್ಲಿಯೇ ಸದ್ದಿಲ್ಲದೆ ವಿಶ್ವ ಸ್ನೂಕರ್ ನಲ್ಲಿ ತನ್ನ ಛಾಪು ಮೂಡಿಸುತ್ತಾ ಸಾಗಿದ್ದಾಳೆ ಈ ಯುವತಿ. 21 ವರ್ಷದ ಒಳಗಿನವರಿಗೆ ಸದ್ಯಕ್ಕೆ ಈಕೆಯನ್ನ ಸೋಲಿಸಲು ಯಾರಿಗೂ ಸಾಧ್ಯವಾಗಲಿಲ್ಲ. ಕಳೆದ 17ನೇ ತಾರೀಕಿನಂದು ಸೌದಿ ಅರೇಬಿಯಾದಲ್ಲಿರುವ ರಿಯಾದ್ (Riyadh) ನಗರದಲ್ಲಿ ನಡೆದ ಸ್ನೂಕರ್ ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದು ತನ್ನ ದೇಶ, ರಾಜ್ಯ, ಕೋಲಾರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ತಂದೆ ಪಾಂಡಿಯನ್ ಕೆಜಿಎಫ್ ನಲ್ಲಿರುವ ಬಿಇಎಂಎಲ್ ನಲ್ಲಿ ಡೆಪ್ಯುಟಿ ಮ್ಯಾನೇಜರ್. ತಾಯಿ ಜಯಲಕ್ಷ್ಮಿ ಗೃಹಿಣಿ. ಬಿಡುವಿನ ಸಂದರ್ಭದಲ್ಲಿ ಕೆಜಿಎಫ್ ನಗರದ ಬಿಇಎಂಎಲ್ ಕ್ಲಬ್ ನಲ್ಲಿರುವ ಬಿಲಿಯರ್ಡ್ಸ್ ನಲ್ಲಿ ಆಟ ಆಡೋದು ಹವ್ಯಾಸ. ತನ್ನ ತಂದೆಯಿಂದಲೆ ಪ್ರೇರಣೆ ಪಡೆದು, ಸ್ನೂಕರ್ ಕ್ಯೂ ಕೈಗೆತ್ತಿಕೊಂಡಿದ್ದಾಳೆ. ತನ್ನ 13ನೇ ವಯಸ್ಸಿಗೆ ಬಾಲ್‌ಗಳನ್ನ ಹೊಡೆಯಲಾರಂಭಿಸಿದ್ದು ಇದೀಗ ವಿಶ್ವ ಚಾಂಪಿಯನ್ ಪಟ್ಟದವರೆಗೆ ತಂದು ನಿಲ್ಲಿಸಿದೆ. ರಾಷ್ಟ್ರೀಯ ಮಟ್ಟದಲ್ಲಿ 20ಕ್ಕೂ ಹೆಚ್ಚು ಪದಕ ಪ್ರಶಸ್ತಿ ಪಡೆದಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ೨೦೧೭ರಲ್ಲಿ ೧೬ ವರ್ಷದೊಳಗಿನವರಲ್ಲಿ ಚೈನಾದಲ್ಲಿ ಕಂಚಿನ ಪದಕ, ೨೦೧೮ರಲ್ಲಿ ರಷ್ಯಾದಲ್ಲಿ ಬೆಳ್ಳಿ ಪದಕ, ೨೦೧೮ರಲ್ಲಿಯೇ ಮತ್ತೊಂದು ಚಿನ್ನ, ೨೦೨೨ರಲ್ಲಿ ರೋಮಾನಿಯಾದಲ್ಲಿ ಮತ್ತೊಂದು ಕಂಚು, ಇದೀಗ ಸೌದಿ ಅರೇಬಿಯಾದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಇನ್ನು ಇದೀಗ ೨೧ ವರ್ಷ ದಾಟಿ ಹಿರಿಯರೊಂದಿಗೆ ಹೋರಾಡಿ ಮಹಿಳಾ ಸ್ನೂಕರ್ ಚಾಂಪಿಯನ್ ಆಗಲು ಹವಣಿಸುತಿದ್ದಾಳೆ. ಅದಷ್ಟೆ ಅಲ್ಲ ಪ್ರೊಫೆಷನಲ್ಸ್ ಕ್ಲಬ್ ಗಳಲ್ಲಿ ಭಾಗವಹಿಸಬೇಕು. ದೇಶಕ್ಕಾಗಿ ಇನ್ನಷ್ಟು ಸಾಧನೆ ಮಾಡಬೇಕು ಎಂದು ವಿನಮ್ರವಾಗಿ ಹೇಳಿಕೊಳ್ಳುತ್ತಾಳೆ. ಇದಕ್ಕೆ ಇವರ ಪೋಷಕರೂ ಕೂಡ ಬೆನ್ನೆಲುಬಾಗಿ ನಿಂತು ತಮ್ಮ ಪುತ್ರಿಯ ಸಾಧನೆಗೆ ಪ್ರೋತ್ಸಾಹಿಸುವ ಮೂಲಕ ದೇಶದ ಕ್ರೀಡಾಕ್ಷೇತ್ರಕ್ಕೆ ತಮ್ಮಕೊಡುಗೆ ನೀಡುತಿದ್ದಾರೆ.
ದೇಶಕ್ಕೆ ಚಿನ್ನ ನೀಡಿದ ನಗರ ಕೆಜಿಎಫ್ ಇದೀಗ ದೇಶಕ್ಕೆ ಚಿನ್ನದ ಹುಡುಗಿಯನ್ನು ನೀಡಿದೆ. ಸ್ನೂಕರ್ ನಲ್ಲಿ ತನ್ನ ಸಾಧನೆ ಮಾಡುತ್ತಿರುವ ಪುತ್ರಿಗೆ ನೀಡಿದ ಪೋಷಕರ ಬೆಂಬಲ ಕೂಡ ನಿರ್ಣಾಯಕ. ಕೋಲಾರ ಜಿಲ್ಲೆಯ ಲ್ಲಿ ಕನ್ನಡರಾಜ್ಯೋತ್ಸವದಲ್ಲಿ ಕಿರ್ತನಾಳನ್ನು ಸನ್ಮಾನಿಸಲಾಗಿದೆ. ಆದರೆ ವಿಶ್ವ ಚಾಂಪಿಯನ್ ಪಟ್ಟದಲ್ಲಿರುವ ಯುವತಿಗೆ ಸರ್ಕಾರ, ಪ್ರಾಯೋಜಕರು ಇನ್ನಷ್ಟು ಬೆಂಬಲಿಸಿ ಸಾಧನೆಗೆ ಸಹಕರಿಸಿದಲ್ಲಿ ಕೀರ್ತನಾ ಇನ್ನಷ್ಟು ಸಾಧನೆಗೈಯಬಹುದು.
ಕೋಲಾರ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ