ಪುನೀತ್ ಮುಖವನ್ನು ನೋಡುತ್ತಾ ಶಿವಣ್ಣ ಮಗುವಿನಂತೆ ಬಿಕ್ಕಿಬಿಕ್ಕಿ ಅತ್ತಿದ್ದು ತಮ್ಮನ ಮೇಲೆ ಅವರಿಗಿರುವ ಅಗಾಧ ಪ್ರೀತಿಯನ್ನು ಸೂಚಿಸುತಿತ್ತು

ಪುನೀತ್ ಮುಖವನ್ನು ನೋಡುತ್ತಾ ಶಿವಣ್ಣ ಮಗುವಿನಂತೆ ಬಿಕ್ಕಿಬಿಕ್ಕಿ ಅತ್ತಿದ್ದು ತಮ್ಮನ ಮೇಲೆ ಅವರಿಗಿರುವ ಅಗಾಧ ಪ್ರೀತಿಯನ್ನು ಸೂಚಿಸುತಿತ್ತು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Oct 30, 2021 | 6:59 PM

ಶನಿವಾರ ಬೆಳಗ್ಗೆ ಪುನೀತ್ ಅವರ ದೇಹವನ್ನಿಟ್ಟಿರುವ ಬಾಕ್ಸ್ ಬಳಿ ತಮ್ಮ ಪತ್ನಿ ಗೀತಾ ಅವರ ಹಿಂದೆ ನಿಂತಿದ್ದ ಶಿವಣ್ಣ ಸಹೋದರನ ಮುಖವನ್ನು ನೋಡಿ ದುಃಖ ತಡೆಯದಾದರು.

ಪುನೀತ್ ರಾಜ್​ಕುಮಾರ ಅವರ ಸಾವಿನ ಸುದ್ದಿ ಕನ್ನಡನಾಡಿನ ಮೇಲೆ ಬರಸಿಡಿಲಿನಂತೆ ಬಂದೆರಗಿದೆ. ಅವರ ಅಭಿಮಾನಿಗಳು ಶೋಕಸಾಗರದಲ್ಲಿ ಮುಳುಗಿದ್ದಾರೆ. ನಮ್ಮ ಲಭ್ಯವಿರುವ ಮಾಹಿತಿಯ ಪ್ರಕಾರ ಪುನೀತ್ ಅವರ ಸಾವಿನ ಸುದ್ದಿ ಕೇಳಿದ ನಂತರ ಇಬ್ಬರು ಅಭಿಮಾನಿಗಳು ಹೃದಯಾಘಾತಕ್ಕೊಳಗಾಗಿ ಮರಣವನ್ನಪ್ಪಿದ್ದಾರೆ. ಇನ್ನೂ ಕೆಲವರು ಅವರ ಪಾರ್ಥೀವ ಶರೀರ ನೋಡಿದ ನಂತರ ಅಸ್ವಸ್ಥರಾಗುತ್ತಿದ್ದಾರೆ. ಶನಿವಾರದಂದು ಹಾಗೆ ಅಸ್ವಸ್ಥರಾದ ಇಬ್ಬರನ್ನು ಕಂಠೀರವ ಸ್ಟೇಡಿಯಂನಿಂದ ಆಸ್ಪತ್ರೆಗಳಿಗೆ ಅಂಬ್ಯುಲೆನ್ಸ್ನಲ್ಲಿ ಕರೆದೊಯ್ಯಲಾಯಿತು. ಅಪ್ಪು ಅವರ ಅಭಿಮಾನಿಗಳು ಈ ಪಾಟಿ ವೇದನೆ, ಸಂಕಟ ಮತ್ತು ನೋವು ಅನುಭವಿಸುತ್ತಿದ್ದರೆ, ಅವರ ಪತ್ನಿ, ಮಕ್ಕಳು ಮತ್ತು ರಕ್ತ ಹಂಚಿಕೊಂಡು ಹುಟ್ಟಿದ ಒಡಹುಟ್ಟಿದರು ಅನುಭವಿಸುತ್ತಿರುವ ಯಾತನೆಯನ್ನು ನಮಗೆ ಊಹಿಸುವುದೂ ಸಾಧ್ಯವಿಲ್ಲ.

ದೊಡ್ಮನೆಗೆ ಶಿವಣ್ಣನೇ ಹಿರಿಯ. ಹಾಗಾಗಿ, ಈ ಸಮಯದಲ್ಲಿ ಅವರ ಮೇಲೆ ಅನೇಕ ಜವಾಬ್ದಾರಿಗಳಿವೆ. ತಮ್ಮನ ದೇಹದ ಮೇಲೆ ಒರಗಿ ಗಟ್ಟಿಯಾಗಿ ಅತ್ತು ಹೃದಯದ ಭಾರವನ್ನು ಕೊಂಚ ಹಗುರ ಮಾಡಿಕೊಳ್ಳುವಷ್ಟು ಪುರುಸೊತ್ತು ಸಹ ಅವರಿಗೆ ನಿನ್ನೆಯಿಂದ ಇರಲಿಲ್ಲ. ಅಲ್ಲದೆ, ತಾನೇ ಹಿರಿಯನಾಗಿ ಅಳಲಾರಂಭಿಸಿದರೆ, ಪುನೀತ್ ಪತ್ನಿ ಅಶ್ವಿನಿ ಮತ್ತು ಚಿಕ್ಕ ಮಗಳು ಹಾಗೂ ಕುಟುಂಬದ ಇತರ ಸದಸ್ಯರು ಧೈರ್ಯ ಕಳೆದುಕೊಂಡು ಕಂಗಾಲಾಗಿ ಬಿಡುತ್ತಾರೆ ಎನ್ನುವ ಆತಂಕವೂ ಅವರಲ್ಲಿ ಮನೆ ಮಾಡಿತ್ತು.

ಅದರೆ ಶನಿವಾರ ಬೆಳಗ್ಗೆ ಪುನೀತ್ ಅವರ ದೇಹವನ್ನಿಟ್ಟಿರುವ ಬಾಕ್ಸ್ ಬಳಿ ತಮ್ಮ ಪತ್ನಿ ಗೀತಾ ಅವರ ಹಿಂದೆ ನಿಂತಿದ್ದ ಶಿವಣ್ಣ ಸಹೋದರನ ಮುಖವನ್ನು ನೋಡಿ ದುಃಖ ತಡೆಯದಾದರು. ಅದುವರೆಗೆ ನಿಯಂತ್ರಣದಲ್ಲಿಟ್ಟುಕೊಂಡಿದ್ದ ಭಾವನೆಗಳ ಕಟ್ಟೆಯೊಡೆಯಿತು. ತಮಗಿಂತ 12 ವರ್ಷ ಚಿಕ್ಕವನಾಗಿದ್ದ ಮತ್ತು ಬಾಲ್ಯದಲ್ಲಿ ತಮ್ಮ ಹೆಗಲ ಮೇಲೆ ಎತ್ತಿ ಆಡಿಸಿದ್ದ ಪ್ರೀತಿಯ ಅಪ್ಪು ಹಾಗೆ ಶವವಾಗಿ ಮಲಗಿದ್ದು ಅವರ ಕರುಳನ್ನು ಕಿವುಚಿತ್ತು. ಹಿಂದಿನದೆಲ್ಲವನ್ನು ನೆನಪಿಸಿಕೊಂಡು ಶಿವಣ್ಣ ಮಗುವಿನಂತೆ ಬಿಕ್ಕಿಬಿಕ್ಕಿ ಅಳಲಾರಂಭಿಸಿದರು. ಪುನೀತ್ ಮುಖವನ್ನು ದಿಟ್ಟಿಸಿ ನೋಡಿ ಏನನ್ನೋ ನೆನೆಪಿಸಿಕೊಂಡು ಮತ್ತೇ ಮತ್ತೇ ಅಳುತ್ತಿದ್ದರು.

ಡಾ ರಾಜ್ ಪುತ್ರರ ನಡುವೆ ಬೆಟ್ಟದಷ್ಟು ಪ್ರೀತಿ-ವಾತ್ಸಲ್ಯಗಳಿವೆ. ನಿನ್ನೆ ರಾಘವೇಂದ್ರ ರಾಜ್ ಕುಮಾರ ಸಹ ಪುನೀತ್ ಬಗ್ಗೆ ಬಹಳ ಭಾವುಕರಾಗಿ ಮಾತಾಡಿದ್ದರು.

ಇದನ್ನೂ ಓದಿ:  Puneeth Rajkumar: ಪುನೀತ್​ ಹೃದಯಾಘಾತದ ವೈರಲ್​ ವಿಡಿಯೋ ಅಸಲಿಯೋ ನಕಲಿಯೋ? ಇಲ್ಲಿದೆ ಫ್ಯಾಕ್ಟ್​ ಚೆಕ್​

Published on: Oct 30, 2021 06:58 PM