ಕಾವೇರಿ ನದಿ ಪ್ರವಾಹದಿಂದ ಕೊಡಗು ಜಿಲ್ಲೆಯ ಹಲವು ರಾಜ್ಯ ಹೆದ್ದಾರಿ ಬಂದ್
ಕಳೆದ 15 ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಇದರಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ನದಿ ತುಂಬಿ ಹರಿಯುತ್ತಿರುವುದರಿಂದ ಒಂದಡೆ ಕಾವೇರಿ ತೀರದ ರೈತರಲ್ಲಿ ಸಂತಸ ಮೂಡಿದೆ. ಮತ್ತೊಂದಡೆ ಕಾವೇರಿ ನದಿ ಪ್ರವಾಹದಿಂದ ಕೊಡಗು ಜಿಲ್ಲೆಯಲ್ಲಿನ ರಸ್ತೆಗಳು ಜಲಾವೃತಗೊಂಡಿವೆ. ಜನಜೀವನ ಅಸ್ಯವ್ಯಸ್ತವಾಗಿದೆ.
ಕೊಡಗು (Kodagu) ಜಿಲ್ಲೆಯಲ್ಲಿ ಮಳೆಯ (Rain) ಅಬ್ಬರ ಮುಂದುವರೆದಿದೆ. ಕಾವೇರಿ ನದಿ (Cauvery River) ಉಕ್ಕಿ ಹರಿಯುತ್ತಿದೆ. ಕಾವೇರಿ ನದಿ ಪ್ರವಾಹದಿಂದ ಮಡಿಕೇರಿ (Madikeri) ತಾಲೂಕಿನ ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಪ್ರವಾಹದಿಂದ (Flood) ನಾಪೋಕ್ಲು-ಚೆರಿಯಪರಂಬು, ನಾಪೋಕ್ಲು-ಹೊದವಾಡ-ಬೊಳಿಬಾಣೆ ರಸ್ತೆ ಜಲಾವೃತಗೊಂಡಿದೆ. ರಸ್ತೆಗಳು ಜಲಾವೃತಗೊಂಡ ಹಿನ್ನೆಲೆಯಲ್ಲಿ ಪಕ್ಕದ ಊರಿಗೆ ತೆರಳಲು ಜನರು ಪರದಾಡುತ್ತಿದ್ದಾರೆ. ಪ್ರವಾಹದಲ್ಲಿ ರಸ್ತೆ ದಾಟಲು ವಾಹನ ಸವಾರರು ಸಾಹಸ ಮಾಡುತ್ತಿದ್ದಾರೆ.
ಜೋರು ಮಳೆ, ಗಾಳಿಯಿಂದ ವಿರಾಜಪೇಟೆ ತಾಲೂಕಿನ ಹಾತೂರು ಗ್ರಾಮದ ಬಳಿ ಬೃಹತ್ ಮರ ರಾಜ್ಯ ಹೆದ್ದಾರಿ ಮೇಲೆ ಉರುಳಿ ಬಿದ್ದಿದೆ. ಇದರಿಂದ ವಿರಾಜಪೇಟೆ-ಗೋಣಿಕೊಪ್ಪಲು ರಸ್ತೆ ಸಂಪರ್ಕ ಕಡಿತವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಯಿಂದ ಮರ ತೆರವು ಕಾರ್ಯ ನಡೆಯುತ್ತಿದೆ.
ಅಪಾರ ಮಳೆಯಿಂದ ಜಿಲ್ಲೆಯ ಜಲಾಪಾತಗಳು ಭೋರ್ಗೆದು ದುಮ್ಮುಕ್ಕುತ್ತಿವೆ. ಇದರಿಂದ ಮುಂಜಾಗೃತಾ ಕ್ರಮವಾಗಿ ಜಿಲ್ಲೆಯ ಯಾವುದೇ ಜಲಪಾತಗಳಿಗೆ ಇಳಿದು ಸ್ನಾನ ಮಾಡುವುದನ್ನ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಜಲಪಾತ ಮಾತ್ರವಲ್ಲ, ನದಿ-ತೊರೆಗಳು, ಝರಿಗಳು, ಸಾರ್ವಜನಿಕ ಕೆರೆಗಳಲ್ಲೂ ಸ್ನಾನ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ವೆಂಕಟ್ ರಾಜಾ ಈ ಆದೇಶ ಹೊರಡಿಸಿದ್ದಾರೆ.
ದೇಶದ ವಿವಿಧೆಡೆ ಜನರು ಸ್ನಾನಕ್ಕೆ ಜಲಪಾತಗಳಲ್ಲಿ ಇಳಿದು ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ.
ಇದರಿಂದ ಎಚ್ಚೆತ್ತ ಜಿಲ್ಲಾಡಳಿತ ಈ ಆದೇಶ ಹೊರಡಿಸಿದೆ. ಇತ್ತ ಮಳೆಯಿಂದಾಗಿ ಚೇಲಾವರ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು, ಸುಮಾರು 50 ಅಡಿ ಎತ್ತರದಿಂದ ಹಾಲ್ನೋರೆಯಾಗಿ ಧುಮ್ಮಿಕ್ಕುವ ರಮಣೀಯ ದೃಷ್ಯ ಕಣ್ ತುಂಬಿಸಿಕೊಳ್ಳಲು ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಇದನ್ನೂ ಓದಿ: ಶೃಂಗೇರಿ ಶಾರದಾ ಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್, ಸಂಧ್ಯಾವಂದನೆ ಮಂಟಪ ಮುಳುಗಡೆ
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ