ಸಾಮಾಜಿಕ ಜಾಲತಾಣಗಳಲ್ಲಿ ಕೊಡಗಿನ ಬಗ್ಗೆ ಹರಿದಾಡುತ್ತಿರುವ ಪೋಸ್ಟ್ಗಳಿಂದ ಆತಂಕಕ್ಕೀಡಾಗಿರುವ ಸ್ಥಳೀಯರು
ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕೊಡಗಿನಲ್ಲಿ ಪ್ರವಾಸೋದ್ಯಮ ವೇಗವಾಗಿ ಬೆಳೆಯುತ್ತಿದೆ, ಆದರೆ ಇತ್ತೀಚಿನ ಬೆಳವಣಿಗೆಗಳು ಕೊಡಗಿನ ಖ್ಯಾತಿಗೆ ಮಸಿ ಬೆಳೆಯುತ್ತಿವೆ, ಇದು ಕೊಡಗಿನ ಹೆಣ್ಣುಮಕ್ಕಳ ಮರ್ಯಾದೆ ಪ್ರಶ್ನೆಯೂ ಆಗಿದೆ, ನಮ್ಮ ಜಿಲ್ಲೆ ಮತ್ತೊಂದು ಗೋವಾ ಆಥವಾ ಥಾಯ್ಲೆಂಡ್ ಆಗಿ ಗುರುತಿಸಿಕೊಳ್ಳುವುದು ನಮಗೆ ಬೇಕಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ಮಡಿಕೇರಿ, ಆಗಸ್ಟ್ 27: ಇದು ಆಘಾತಕಾರಿ ಮತ್ತು ಆತಂಕಕಾರಿ ಬೆಳವಣಿಗೆ. ಕರ್ನಾಟಕದ ಕಾಶ್ಮೀರ ಮತ್ತು ಭಾರತದ ಸ್ಕಾಟ್ಲೆಂಡ್ (Scotland Of India) ಎಂದು ಕರೆಸಿಕೊಳ್ಳುವ ಕೊಡಗಿನಲ್ಲಿ ಪ್ರವಾಸಿಗರಿಗೆ ಹುಡುಗಿಯರು ಮತ್ತು ಮಹಿಳೆಯರು ಲಭ್ಯವಿದ್ದಾರೆ ಎಂದು ಯಾರೋ ದುಷ್ಟರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ. ಕಾಫಿ ಪ್ಲಾಂಟೇಶನ್, ರೇನ್ ಟೂರಿಸಂಗೆ ಪ್ರಸಿದ್ಧಿ ಹೊಂದಿರುವ, ರಮಣೀಯ ಗುಡ್ಡಗಾಡು ಪ್ರದೇಶಗಳು, ಹಸಿರನ್ನು ಹೊದ್ದಂತಿರುವ ನೆಲ, ಮತ್ತು ಭೋರ್ಗರೆಯುವ ಹಲವಾರು ಜಲಪಾತಗಳಿಂದ ಪ್ರತಿದಿನ ಸಾವಿರಾರು ಪ್ರವಾಸಿಗರನ್ನು ಕೈಮಾಡಿ ಕರೆಯುವ ಕೊಡಗಿನ ಬಗ್ಗೆ ಅಪಪ್ರಚಾರ ಮಾಡುವಲ್ಲಿ ಒಂದು ಗುಂಪು ಮಗ್ನವಾಗಿರುವಂತಿದೆ ಎಂದು ಸ್ಥಳೀಯ ಪವನ್ ಆತಂಕ ವ್ಯಕ್ತಪಡಿಸುತ್ತಾರೆ. ದುಷ್ಟರ ಹುನ್ನಾರಗಳಿಗೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಕೂಡಲೇ ಕಡಿವಾಣ ಹಾಕದಿದ್ದರೆ ಎಲ್ಲ ಒಳ್ಳೇ ಕಾರಣಗಳಿಗೆ ಹೆಸರಾಗಿರುವ ಕೊಡಗು ಮುಂಬರುವ ದಿನಗಳಲ್ಲಿ ಸೆಕ್ಸ್ ಟೂರಿಸಂ ತಾಣವೆಂಬ ಅಪಖ್ಯಾತಿಗೆ ಗುರಿಯಾಗುವ ಸಂಭವವಿದೆ ಎಂದು ಅವರು ಹೇಳುತ್ತಾರೆ.
ಇದನ್ನೂ ಓದಿ: ಕೊಡಗು, ಉತ್ತರ ಕನ್ನಡದಲ್ಲಿ ಭೋರ್ಗರೆತಿರುವ ಫಾಲ್ಸ್, ಬೀಚ್: ಪ್ರವಾಸಿಗರಿಗೆ ನಿರ್ಬಂಧ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ