ಖಾಸಗೀತನಕ್ಕೆ ಧಕ್ಕೆ; ಆಸೀಸ್ ಮಾಧ್ಯಮಗಳ ಮೇಲೆ ಮುನಿದ ವಿರಾಟ್; ವಿಡಿಯೋ ನೋಡಿ

|

Updated on: Dec 19, 2024 | 4:00 PM

Virat Kohli Australia: ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್​ ಪಂದ್ಯಕ್ಕಾಗಿ ಮೆಲ್ಬೋರ್ನ್‌ಗೆ ಆಗಮಿಸಿದ ವಿರಾಟ್ ಕೊಹ್ಲಿ ವಿಮಾನ ನಿಲ್ದಾಣದಲ್ಲೇ ಮಾಧ್ಯಮಗಳೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಅಲ್ಲದೆ ಆಸ್ಟ್ರೇಲಿಯಾದ ಪತ್ರಕರ್ತರಿಗೆ ನನ್ನ ಅನುಮತಿಯಿಲ್ಲದೆ ನೀವು ನನ್ನ ಮಕ್ಕಳ ಫೋಟೋ ತೆಗೆಯುವಂತಿಲ್ಲ ಎಂದು ಹೇಳಿದ್ದಾರೆ. ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

ಭಾರತ ತಂಡ ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಸರಣಿಯ ಮೂರು ಪಂದ್ಯಗಳು ನಡೆದಿದ್ದು, ಇದೀಗ ನಾಲ್ಕನೇ ಪಂದ್ಯ ಮೆಲ್ಬೋರ್ನ್‌ನಲ್ಲಿ ನಡೆಯಲಿದೆ. ಹೀಗಾಗಿ ಈ ಬಾರಿಯ ಬಾಕ್ಸಿಂಗ್ ಡೇ ಟೆಸ್ಟ್‌ಗಾಗಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮೆಲ್ಬೋರ್ನ್ ತಲುಪಿದ್ದಾರೆ. ಈ ವೇಳೆ ವಿರಾಟ್ ಕೊಹ್ಲಿ ಅವರು ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ಆಸ್ಟ್ರೇಲಿಯಾದ ಮಾಧ್ಯಮಗಳೊಂದಿಗೆ ವಾಗ್ವಾದ ನಡೆಸಿದ್ದು, ಇದೀಗ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಆಸೀಸ್ ಮಾಧ್ಯಮಗಳ ಅತಿರೇಕ

ಬಾಕ್ಸಿಂಗ್ ಡೇ ಟೆಸ್ಟ್‌ಗಾಗಿ ಮೆಲ್ಬೋರ್ನ್​ಗೆ ಬಂದಿಳಿದ ವಿರಾಟ್ ಕೊಹ್ಲಿ ವಿಮಾನ ನಿಲ್ದಾಣದಲ್ಲೇ ಮಾಧ್ಯಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಚಾನೆಲ್ 7 ವರದಿ ಪ್ರಕಾರ, ಕೊಹ್ಲಿ ಮತ್ತು ಟಿವಿ ಪತ್ರಕರ್ತರ ನಡುವೆ ಸ್ವಲ್ಪ ವಾಗ್ವಾದ ನಡೆದಿದೆ. ಆರಂಭದಲ್ಲಿ ಏನೂ ಮಾತನಾಡದೆ ಅಲ್ಲಿಂದ ಹೊರಟು ಹೋದ ಕೊಹ್ಲಿ ನಂತರ ಮತ್ತೆ ಬಂದು ಆಸ್ಟ್ರೇಲಿಯಾದ ಪತ್ರಕರ್ತರಿಗೆ ನನ್ನ ಅನುಮತಿಯಿಲ್ಲದೆ ನೀವು ನನ್ನ ಮಕ್ಕಳ ಫೋಟೋ ತೆಗೆಯುವಂತಿಲ್ಲ ಎಂದು ಹೇಳಿದ್ದಾರೆ. ಆದಾಗ್ಯೂ, ಚಾನೆಲ್ 7 ಅವರ ಮಕ್ಕಳ ಫೋಟೋಗಳನ್ನು ಕ್ಲಿಕ್ ಮಾಡಿಲ್ಲ ಅಥವಾ ಅವರ ವೀಡಿಯೊಗಳನ್ನು ಮಾಡಿಲ್ಲ ಎಂದು ಹೇಳಿಕೊಂಡಿದೆ. ಮುಂದುವರೆದು ಮಾತನಾಡಿದ ವಿರಾಟ್ ಕೊಹ್ಲಿ ತನ್ನ ಖಾಸಗೀತನವನ್ನು ಗೌರವಿಸುವಂತೆ ಪಾಪರಾಜಿಗಳ ಬಳಿ ಕೇಳಿಕೊಂಡು ಅಲ್ಲಿಂದ ಹೊರಟು ಹೋಗಿದ್ದಾರೆ.

ವಿರಾಟ್ ಕೊಹ್ಲಿ ಕಳಪೆ ಫಾರ್ಮ್

ವಿರಾಟ್ ಕೊಹ್ಲಿಗೆ ಆಸ್ಟ್ರೇಲಿಯಾ ಪ್ರವಾಸ ಇಲ್ಲಿಯವರೆಗೆ ಅಷ್ಟು ಹೇಳಿಕೊಳ್ಳುವಂತಿಲ್ಲ. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ್ದ ವಿರಾಟ್, ಆ ನಂತರದ ಮುಂದಿನ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಒಟ್ಟು 26 ರನ್‌ಗಳಿಸಲಷ್ಟೇ ಶಕ್ತರಾಗಿದ್ದಾರೆ. ಇದು ಕೊಹ್ಲಿಗೆ ಸವಾಲಿನ ಸಮಯವಾಗಿದ್ದು, ಅವರ ಆತ್ಮವಿಶ್ವಾಸದ ಮೇಲೂ ಪರಿಣಾಮ ಬೀರಿದೆ. ಇದೀಗ ಉಭಯ ತಂಡಗಳ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಡಿಸೆಂಬರ್ 26 ರಿಂದ ಮೆಲ್ಬೋರ್ನ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಾದರೂ ಕೊಹ್ಲಿ ಬ್ಯಾಟ್ ಆಗಸ ನೋಡಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

Published on: Dec 19, 2024 03:58 PM