ಮೈಸೂರು ದಸರಾ 2026: ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರರಿಗೂ ಮೊದಲು ದಸರಾ ಉದ್ಘಾಟಿಸಿದ್ದ ಮಠಾಧೀಶರು ಇವರು!
ವಿಶ್ವವಿಖ್ಯಾತ ಮೈಸೂರು ದಸರಾ 2026 ನ್ನು ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಉದ್ಘಾಟಿಸಲಿದ್ದಾರೆ. ಡಿ.ಕೆ. ಶಿವಕುಮಾರ್ ಈ ಬಗ್ಗೆ ಘೋಷಿಸಿದ್ದು, 14 ವರ್ಷಗಳ ಬಳಿಕ ಮಠಾಧೀಶರೊಬ್ಬರು ದಸರಾ ಉದ್ಘಾಟಿಸುತ್ತಿದ್ದಾರೆ. ನಾಡಿನ ಸುಭಿಕ್ಷೆ, ಶಾಂತಿ ಮತ್ತು ಬರಗಾಲ ನಿವಾರಣೆಗಾಗಿ ಈ ಧಾರ್ಮಿಕ ಉದ್ಘಾಟನೆಯು ವಿಶೇಷ ಮಹತ್ವ ಪಡೆದುಕೊಂಡಿದೆ.
ಮೈಸೂರು, ಸೆಪ್ಟೆಂಬರ್ 26: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. 2026ನೇ ಸಾಲಿನ ದಸರಾವನ್ನು ಯಾರು ಉದ್ಘಾಟಿಸಲಿದ್ದಾರೆ ಎಂಬ ಕುತೂಹಲಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೆರೆ ಎಳೆದಿದ್ದಾರೆ. ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಈ ಬಾರಿ ನಾಡಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿರುವ ಶ್ರೀಗಳು, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಮಹತ್ವದ ಸೇವೆ ಸಲ್ಲಿಸಿದ್ದಾರೆ.
ದಸರಾ ಉದ್ಘಾಟನೆಯನ್ನು ಧಾರ್ಮಿಕ ಕಾರ್ಯಕ್ರಮವೆಂದು ಪರಿಗಣಿಸಲಾಗಿದ್ದು, ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿ, ನಾಡಿನ ಒಳಿತಿಗೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಮಳೆ-ಬೆಳೆ ಸಮೃದ್ಧಿಯಾಗಲಿ, ರಾಜ್ಯದಲ್ಲಿ ಶಾಂತಿ ನೆಲೆಸಲಿ ಎಂಬ ಆಶಯದೊಂದಿಗೆ ಮಠಾಧೀಶರು ಉದ್ಘಾಟಿಸುವುದು ವಿಶೇಷ ಮಹತ್ವ ಪಡೆದಿದೆ. 2007ರಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರಿಂದ ಆರಂಭವಾದ ಮಠಾಧೀಶರಿಂದ ದಸರಾ ಉದ್ಘಾಟನೆ ಪರಂಪರೆ 2012ರಲ್ಲಿ ಸ್ಥಗಿತಗೊಂಡಿತ್ತು. ಇದೀಗ 14 ವರ್ಷಗಳ ಸುದೀರ್ಘ ಅಂತರದ ನಂತರ ಮಠಾಧೀಶರಿಗೆ ಈ ಗೌರವ ಲಭಿಸಿರುವುದು ಸಂತಸ ಮೂಡಿಸಿದೆ. ರಾಜ್ಯವು ಬರಗಾಲದ ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಶ್ರೀಗಳ ಪ್ರಾರ್ಥನೆ ಫಲಕಾರಿಯಾಗಲಿ ಎಂಬ ವಿಶ್ವಾಸ ಎಲ್ಲರಲ್ಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
