ಕೊಟ್ಟಿಯೂರು ದೇವಾಲಯದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ಆರೋಪ: ತಾರತಮ್ಯದ ಬಗ್ಗೆಯೂ ಭಕ್ತರ ಅಸಮಾಧಾನ

Updated on: Jun 09, 2026 | 1:00 PM

ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ಮತ್ತು ಭೇದಭಾವ ಆರೋಪ ಕೇಳಿಬಂದಿದೆ. ಅನ್ನದಾನಕ್ಕೆ ಸಾವಿರ ರೂಪಾಯಿ ಟಿಕೆಟ್ ಪಡೆದಿದ್ದರೂ ಕ್ಯೂನಲ್ಲಿ ಕಾಯಿಸಿದ್ದು, ಸ್ಥಳೀಯರಿಗೆ ಆದ್ಯತೆ ನೀಡಲಾಗಿದೆ. ಇದನ್ನು ಪ್ರಶ್ನಿಸಿದಾಗ ಸಿಬ್ಬಂದಿ ದುರ್ವರ್ತನೆ ತೋರಿದ್ದಾರೆ. ಸಮರ್ಪಕ ಕ್ಯೂ ನಿರ್ವಹಣೆ ಇಲ್ಲದೆ ಹಲವು ಕನ್ನಡಿಗರು ದರ್ಶನವಿಲ್ಲದೆ ಹಿಂದಿರುಗಿದ್ದಾರೆ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಿರುವನಂತಪುರಂ, ಜೂನ್​​ 09: ಕೇರಳದ ಸುಪ್ರಸಿದ್ಧ ಕೊಟ್ಟಿಯೂರು ಶಿವ ದೇವಸ್ಥಾನದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂದು ಕರ್ನಾಟಕದ ಭಕ್ತರು ಗಂಭೀರ ಆರೋಪ ಮಾಡಿದ್ದಾರೆ. ದೇವಸ್ಥಾನದಲ್ಲಿ ಅನ್ನದಾನಕ್ಕೆ 1,000 ರೂಪಾಯಿ ಟಿಕೆಟ್ ಪಡೆದಿದ್ದರೂ, ಭಕ್ತರನ್ನು ಸುಮಾರು 30-40 ನಿಮಿಷಗಳ ಕಾಲ ಕ್ಯೂನಲ್ಲಿ ನಿಲ್ಲಿಸಲಾಗಿತ್ತು. ಆದರೆ, ಸ್ಥಳೀಯರಿಗೆ ಮತ್ತು ತಮ್ಮ ಭಾಷೆಯವರಿಗೆ ಹಿಂಬಾಗಿಲಿನಿಂದ ಅಥವಾ ಮಧ್ಯಪ್ರವೇಶಿಸಿ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ಭಕ್ತರು ದೂರಿದ್ದಾರೆ. ಈ ತಾರತಮ್ಯವನ್ನು ಪ್ರಶ್ನಿಸಲು ಮತ್ತು ವಿಡಿಯೋ ಮಾಡಲು ಮುಂದಾದಾಗ, ದೇವಸ್ಥಾನದ ಸಿಬ್ಬಂದಿ ಫೋನ್ ಕಸಿದುಕೊಳ್ಳಲು ಪ್ರಯತ್ನಿಸಿ ದೌರ್ಜನ್ಯ ಮಾಡಿದ್ದಾರೆ. ಕ್ಯೂ ನಿರ್ವಹಣೆಯಲ್ಲಿ ಸಂಪೂರ್ಣ ವೈಫಲ್ಯ ಎದುರಾಗಿದ್ದು, ಭಕ್ತರೊಂದಿಗೆ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ್ದಾರೆ. ಕರ್ನಾಟಕದಿಂದ ತೆರಳಿದ್ದ ಶೇ.50-60ರಷ್ಟು ಜನರಿಗೆ ದರ್ಶನವೇ ಆಗಿಲ್ಲ. ಹೀಗಾಗಿ ನಿರಾಸೆಯಿಂದ ಹಿಂದಿರುಗಿದ್ದಾರೆ ಎಂದು ಭಕ್ತ ಪವನ್ ವಿವರಿಸಿದ್ದಾರೆ. ದೇವರು, ದೇವಸ್ಥಾನದ ಬಗ್ಗೆ ನಮಗೆ ಯಾವುದೇ ನೆಗೆಟಿವ್ ಭಾವನೆ ಇಲ್ಲ. ಆದರೆ ಕ್ಯೂ ನಿರ್ವಹಣೆಯ ವೈಫಲ್ಯ ಮತ್ತು ದೌರ್ಜನ್ಯದ ವಿರುದ್ಧ ನಮ್ಮ ಆಕ್ಷೇಪವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Jun 09, 2026 12:55 PM
Follow Us