KPSC Recruitment Scam: CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
ಪಶು ವೈದ್ಯ ಅಧಿಕಾರಿ ನೇಮಕಾತಿ ಅಕ್ರಮದಲ್ಲಿ ಸಿಐಡಿ ಹಲವು ಸ್ಫೋಟಕ ಅಂಶಗಳನ್ನು ಪತ್ತೆ ಮಾಡಿದೆ. ಪರೀಕ್ಷೆಗಳ ಉಸ್ತುವಾರಿಯಾಗಿದ್ದ ಜ್ಞಾನೇಂದ್ರ ಕುಮಾರ್ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ, 40 ಲಕ್ಷ ರೂ.ಗೆ ಮಾರಾಟ ಮಾಡಿದ್ದು ಬಯಲಾಗಿದೆ. ಮಧ್ಯವರ್ತಿ ಬಸವರಾಜ್ ಕನ್ನಾಳೆ ಮೂಲಕ ಹಣ ವಸೂಲಿ ಮಾಡಲಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ. ಸಾಕ್ಷಿ ನಾಶಕ್ಕೂ ಯತ್ನಿಸಿದ್ದರು.
ಬೆಂಗಳೂರು, ಆಗಸ್ಟ್ 31: ಕೆಪಿಎಸ್‌ಸಿಯ 400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ತೀವ್ರಗೊಂಡಿದ್ದು, ಸ್ಫೋಟಕ ಸತ್ಯಗಳು ಬಯಲಾಗಿವೆ. ಎಲ್ಲಾ ಪರೀಕ್ಷೆಗಳ ಉಸ್ತುವಾರಿ ಹಾಗೂ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರೇ ಈ ಪ್ರಶ್ನೆಪತ್ರಿಕೆ ಸೋರಿಕೆಯ ಮುಖ್ಯ ರೂವಾರಿ ಎಂದು ತಿಳಿದುಬಂದಿದೆ.
ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಿದ್ದ ಜ್ಞಾನೇಂದ್ರ, ಮಧ್ಯವರ್ತಿ ಹಾಗೂ ಬೀದರ್ ಜಿಲ್ಲೆಯ ಬಿಜೆಪಿ ಮುಖಂಡ ಬಸವರಾಜ್ ಕನ್ನಾಳೆ ಮೂಲ ಅಭ್ಯರ್ಥಿಗಳಿಗೆ ಒಂದಕ್ಕೆ 40 ಲಕ್ಷ ರೂಪಾಯಿಯಂತೆ ಮಾರಾಟ ಮಾಡಿದ್ದರು. ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಓಎಂಆರ್ ಶೀಟ್ ತಿದ್ದುಪಡಿ ಹಾಗೂ ಸ್ಟ್ರಾಂಗ್ ರೂಮ್ ಸಿಸಿಟಿವಿ ದೃಶ್ಯಾವಳಿಗಳನ್ನು ಅಳಿಸಲು ಯತ್ನಿಸಿರುವುದು ಪತ್ತೆಯಾಗಿದೆ.
ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಜ್ಞಾನೇಂದ್ರ ಕುಮಾರ್ ಮತ್ತು ಬಸವರಾಜ್ ಕನ್ನಾಳೆಯವರನ್ನು ಬಂಧಿಸಿದ್ದಾರೆ. ಬಸವರಾಜ್ ಅಭ್ಯರ್ಥಿಗಳು ಹಾಗೂ ಅಧಿಕಾರಿಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಿದ್ದು, ಬ್ಯಾಂಕ್ ಖಾತೆ ಹಾಗೂ ನಗದು ರೂಪದಲ್ಲಿ ಲಕ್ಷಾಂತರ ರೂಪಾಯಿ ಹಣದ ವ್ಯವಹಾರ ನಡೆಸಿರುವುದು ದೃಢಪಟ್ಟಿದೆ. ಅಲ್ಲದೆ, ಬಸವರಾಜ್ ಇತರ ಗ್ರೇಡ್-1 ನೇಮಕಾತಿಗಳಲ್ಲೂ ಅಕ್ರಮ ಎಸಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದು, ಸಿಐಡಿ ತನಿಖೆ ಮುಂದುವರಿದಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
