ಕೆಪಿಎಸ್‌ಸಿ ಪಶುವೈದ್ಯರ ನೇಮಕಾತಿ ಹಗರಣ: ವರ್ಷದಲ್ಲಿ ₹10 ಕೋಟಿಗೂ ಹೆಚ್ಚು ವ್ಯವಹಾರ ಮಾಡಿದ್ದ ಶಿವಶಂಕರಪ್ಪ
ಕೆಪಿಎಸ್‌ಸಿ ಪಶುವೈದ್ಯರ ನೇಮಕಾತಿ ಹಗರಣದಲ್ಲಿ ಶಿವಶಂಕರಪ್ಪ ಒಂದು ವರ್ಷದಲ್ಲಿ 10 ಕೋಟಿಗೂ ಹೆಚ್ಚು ವ್ಯವಹಾರ ನಡೆಸಿದ್ದಾರೆ ಎಂದು ಇಡಿ ತನಿಖೆಯಿಂದ ಬಯಲಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿಯೊಂದಿಗೆ ಕೈಜೋಡಿಸಿರುವ ಶಿವಶಂಕರಪ್ಪ, ಆತನಿಂದ 4.99 ಕೋಟಿ ರೂಪಾಯಿ ಪಡೆದಿದ್ದಾರೆ. ಇಡಿ ದಾಳಿ ವೇಳೆ ರಿಯಲ್ ಎಸ್ಟೇಟ್ ಉದ್ಯಮಿ ಕಾರಿನಲ್ಲಿ ಮಹತ್ವದ ಕೈಬರಹದ ದಾಖಲೆಗಳು ಪತ್ತೆಯಾಗಿವೆ.
ಬೆಂಗಳೂರು, ಅಕ್ಟೋಬರ್ 29: ಕೆಪಿಎಸ್‌ಸಿ ಪಶುವೈದ್ಯರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಶಿವಶಂಕರಪ್ಪ ಒಂದು ವರ್ಷದ ಅವಧಿಯಲ್ಲಿ 10 ಕೋಟಿ ರೂಪಾಯಿಗೂ ಅಧಿಕ ವ್ಯವಹಾರ ನಡೆಸಿರುವುದು ಇಡಿ (ಜಾರಿ ನಿರ್ದೇಶನಾಲಯ) ತನಿಖೆಯಿಂದ ಹೊರಬಿದ್ದಿದೆ. ಈ ಹಗರಣದ ತನಿಖೆಯನ್ನು ತೀವ್ರಗೊಳಿಸಿರುವ ಇಡಿ ಅಧಿಕಾರಿಗಳು, ಶಿವಶಂಕರಪ್ಪ ರಿಯಲ್ ಎಸ್ಟೇಟ್ ಉದ್ಯಮಿಯೊಂದಿಗೆ ಕೈಜೋಡಿಸಿ ಈ ಹಣಕಾಸು ವ್ಯವಹಾರ ನಡೆಸಿದ್ದಾರೆ ಎಂಬುದನ್ನು ಪತ್ತೆ ಮಾಡಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿಯಿಂದ ಶಿವಶಂಕರಪ್ಪ 4.99 ಕೋಟಿ ರೂಪಾಯಿ ಪಡೆದುಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. 2025ರ ಆಗಸ್ಟ್ ಮತ್ತು ಡಿಸೆಂಬರ್ ಅವಧಿಯಲ್ಲಿ ಈ ಹಣಕಾಸು ವಹಿವಾಟು ನಡೆದಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ. ಈ ಮಾಹಿತಿ ಆಧರಿಸಿ, ಇಡಿ ಅಧಿಕಾರಿಗಳು ರಿಯಲ್ ಎಸ್ಟೇಟ್ ಉದ್ಯಮಿಯ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ದಾಳಿಯ ವೇಳೆ, ರಿಯಲ್ ಎಸ್ಟೇಟ್ ಉದ್ಯಮಿಯ ಕಾರಿನಲ್ಲಿ ಕೆಲವು ಮಹತ್ವದ ದಾಖಲೆಗಳು ಪತ್ತೆಯಾಗಿದ್ದು, ಅವುಗಳಲ್ಲಿ ಕೈಬರಹದ ಟಿಪ್ಪಣಿಗಳು ಸಹ ಸೇರಿವೆ.
ಈ ಕೈಬರಹದ ದಾಖಲೆಗಳಲ್ಲಿ ಶಿವಶಂಕರಪ್ಪ ಸಾಹುಕಾರ್ ಎಂದು ನಮೂದಿಸಲಾಗಿದ್ದು, ಅವರ ವ್ಯವಹಾರಗಳು ಮತ್ತಷ್ಟು ಸ್ಪಷ್ಟವಾಗಿ ಬಯಲಾಗಿವೆ. ಕೆಪಿಎಸ್‌ಸಿ ಕರ್ಮಕಾಂಡದ ಕುರಿತಂತೆ ಹೆಚ್ಚಿನ ತನಿಖೆ ನಡೆಸಿದಾಗ, ಆರೋಪಿಯಾಗಿರುವ ಶಿವಶಂಕರಪ್ಪ ಪಾತ್ರ ಮತ್ತು ಅವರ ಹಣಕಾಸು ವಹಿವಾಟುಗಳು ಯಾವ ಮಟ್ಟಿಗೆ ವ್ಯಾಪಿಸಿವೆ ಎಂಬುದು ಬೆಳಕಿಗೆ ಬರುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
