ಕೃಷ್ಣ ಜನ್ಮಾಷ್ಟಮಿ 2026: ಉಡುಪಿ ಶ್ರೀಕೃಷ್ಣ ಮಠದಲ್ಲಿ ಅರ್ಘ್ಯ ಪ್ರದಾನ, ಮಥುರಾವರೆಗೂ ಭಕ್ತಿ-ಸಂಭ್ರಮದ ಆಚರಣೆ

Edited By:

Updated on: Sep 05, 2026 | 7:23 AM

ಗೋಪೀ ನಂದನ ಶ್ರೀಕೃಷ್ಣನ ಜನ್ಮಾಷ್ಟಮಿ 2026 ಅನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಉಡುಪಿ ಶ್ರೀಕೃಷ್ಣ ಮಠದಲ್ಲಿ ಮಧ್ಯರಾತ್ರಿ ಅರ್ಘ್ಯ ಪ್ರದಾನ, ಮಥುರಾದಲ್ಲಿ ವಿಶೇಷ ಅಲಂಕಾರಗಳು, ಮತ್ತು ಬೆಂಗಳೂರಿನ ಇಸ್ಕಾನ್ ದೇಗುಲದಲ್ಲಿ ಭಜನೆ, ಕೀರ್ತನೆಗಳು ನಡೆದವು. ವಿವಿಧ ನಗರಗಳಲ್ಲಿ ಭಕ್ತರು ಕೃಷ್ಣ ಲೀಲೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.

ಬೆಂಗಳೂರು, ಸೆಪ್ಟೆಂಬರ್ 5: ಶ್ರೀಕೃಷ್ಣ ಜನ್ಮಾಷ್ಟಮಿ 2026 ಅನ್ನು ದೇಶಾದ್ಯಂತ ಅಪಾರ ಭಕ್ತಿ ಮತ್ತು ಸಂಭ್ರಮದಿಂದ ಶುಕ್ರವಾರ ಆಚರಿಸಲಾಯಿತು. ಉಡುಪಿಯಿಂದ ತೊಡಗಿ ಮಥುರಾವರೆಗೂ ಕೃಷ್ಣ ದೇಗುಲಗಳು ಭಕ್ತರಿಂದ ತುಂಬಿ ತುಳುಕಿದವು. ಮುರಾರಿಯನ್ನು ವಿವಿಧ ವೇಷಭೂಷಣಗಳಿಂದ ಅಲಂಕರಿಸಲಾಗಿದ್ದು, ದೇವಾಲಯಗಳು ಕಂಗೊಳಿಸುತ್ತಿದ್ದವು. ಉಡುಪಿ ಶ್ರೀಕೃಷ್ಣ ಮಠದಲ್ಲಿ ಮಧ್ಯರಾತ್ರಿ ಶ್ರೀಕೃಷ್ಣನಿಗೆ ಅರ್ಘ್ಯ ಸಮರ್ಪಣೆ ಮಾಡಲಾಯಿತು. ಪರ್ಯಾಯ ಶ್ರೀ ವೇದವರ್ಧನ ತೀರ್ಥ ಶ್ರೀಗಳು ಇಡೀ ದಿನ ಉಪವಾಸವಿದ್ದು ಚಂದ್ರನಿಗೆ ಅರ್ಘ್ಯ ಪ್ರದಾನ ಮಾಡಿದರು. ಇಂದು ಇಲ್ಲಿ ಅದ್ದೂರಿಯಾಗಿ ವಿಟ್ಲಪಿಂಡಿ ಮಹೋತ್ಸವ ಮತ್ತು ಮೊಸರು ಕುಡಿಕೆ ಸಂಭ್ರಮ ನಡೆಯಲಿದೆ. ಬೆಂಗಳೂರಿನ ಇಸ್ಕಾನ್ ದೇಗುಲದಲ್ಲಿ ಕೃಷ್ಣನಿಗೆ ಮಾಡಿದ ಅಲಂಕಾರಗಳು ಭಕ್ತರನ್ನು ಸಮ್ಮೋಹನಗೊಳಿಸಿದವು. ನಟಿ ಸಾನ್ವಿ ಶ್ರೀವಸ್ತವ್ ಸೇರಿದಂತೆ ಹಲವು ಭಕ್ತರು ಕೀರ್ತನೆ, ಭಜನೆಯಲ್ಲಿ ಪಾಲ್ಗೊಂಡರು.

ಕೃಷ್ಣನ ಜನ್ಮಸ್ಥಳ ಉತ್ತರ ಪ್ರದೇಶದ ಮಥುರಾದಲ್ಲಿ ಶ್ರೀಕೃಷ್ಣ ವಿವಿಧ ಬಗೆಯ ಅಲಂಕಾರಗಳಿಂದ ಕಂಗೊಳಿಸುತ್ತಿದ್ದ. ಭಕ್ತರು ಭಜನೆಯಲ್ಲಿ ಕುಣಿದು ಕುಪ್ಪಳಿಸಿದರು. ದೆಹಲಿಯ ಬಿರ್ಲಾ ಮಂದಿರಕ್ಕೆ ಕೇಂದ್ರ ಸಚಿವ ಅಮಿತ್ ಶಾ ಭೇಟಿ ನೀಡಿದರೆ, ದೆಹಲಿ ಸಿಎಂ ರೇಖಾ ಗುಪ್ತಾ ಕೂಡ ಶಂಕರಪುರದ ಕೃಷ್ಣ ಮಂದಿರದಲ್ಲಿ ಸಂಭ್ರಮದಲ್ಲಿ ಭಾಗಿಯಾದರು. ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ ಮತ್ತು ಗುಜರಾತ್‌ನಲ್ಲೂ ಜನ್ಮಾಷ್ಟಮಿ ಸಂಭ್ರಮ ಮನೆ ಮಾಡಿತ್ತು. ತಾಯಂದಿರು ತಮ್ಮ ಮಕ್ಕಳಿಗೆ ರಾಧಾ-ಕೃಷ್ಣರ ವೇಷ ತೊಡಿಸಿ ಸಂಭ್ರಮಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us