ಕುಕ್ಕೆ ಸುಬ್ರಹ್ಮಣ್ಯ ದೇಗುಲ ಆಡಳಿತ ಕಛೇರಿ ಮುಂದೆ ಸತ್ತ ನಾಗರಹಾವು ಇಟ್ಟು ಪ್ರತಿಭಟನೆ, ಕಾರಣವೇನು?

ಸತ್ತ ನಾಗರಹಾವನ್ನು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇಗುಲ ಆಡಳಿತ ಕಛೇರಿ ಮುಂದೆ ಇಟ್ಟು ಪ್ರತಿಭಟನೆ ನಡೆಸಿದ ವಿಚಿತ್ರ ಘಟನೆಯೊಂದು ಇಂದು(ಜು.12) ನಡೆದಿದೆ. ಬಳಿಕ ಇನ್ನು ಸಹಾಯಕ ಆಯುಕ್ತರ ಆದೇಶದ ಬಳಿಕ ಅರ್ಚಕರು ನಾಗನಿಗೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಹಾಗಾದರೆ ಇಲ್ಲಿ ಆಗಿದ್ದೇನು? ಈ ಕುರಿತು ವಿವರ ಇಲ್ಲಿದೆ.

ಕುಕ್ಕೆ ಸುಬ್ರಹ್ಮಣ್ಯ ದೇಗುಲ ಆಡಳಿತ ಕಛೇರಿ ಮುಂದೆ ಸತ್ತ ನಾಗರಹಾವು ಇಟ್ಟು ಪ್ರತಿಭಟನೆ, ಕಾರಣವೇನು?
|

Updated on: Jul 12, 2024 | 7:58 PM

ದಕ್ಷಿಣ ಕನ್ನಡ, ಜು.12: ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇಗುಲ(Kukke Subrahmanya Temple) ಆಡಳಿತ ಕಛೇರಿ ಮುಂದೆ ಸತ್ತ ನಾಗರಹಾವು ಇಟ್ಟು ಪ್ರತಿಭಟನೆ ನಡೆಸಿದ ಘಟನೆ ಇಂದು(ಶುಕ್ರವಾರ) ನಡೆದಿದೆ. ಕುಕ್ಕೆ ಸುಬ್ರಹ್ಮಣ್ಯ ಸಮೀಪದ ರಸ್ತೆಯಲ್ಲಿ ವಾಹನದಡಿಗೆ ಬಿದ್ದ ನಾಗರಹಾವೊಂದು ಸಾವನ್ನಪ್ಪಿತ್ತು. ಈ ವಿಚಾರವನ್ನು ಸ್ಥಳೀಯರು ಸೇರಿಕೊಂಡು ಕುಕ್ಕೆ ಸುಬ್ರಹ್ಮಣ್ಯದ ಸಿಬ್ಬಂದಿಗಳ ಗಮನಕ್ಕೆ ತಂದಿದ್ದರು. ಆದರೆ, ಕ್ಷೇತ್ರದ ಸಿಬ್ಬಂದಿಗಳಿಂದ ಯಾವುದೇ ಸ್ಪಂದನೆ ದೊರಕದ ಹಿನ್ನಲೆ ಮೃತಪಟ್ಟ ನಾಗರಹಾವನ್ನು ದೇವಸ್ಥಾನದ ಆಡಳಿತ ಕಛೇರಿ ಎದುರಿಗಿಟ್ಟು ಪ್ರತಿಭಟನೆ ನಡೆಸಿದ್ದಾರೆ.

ಸತ್ತ ತಕ್ಷಣ ಅಂತ್ಯಸಂಸ್ಕಾರ ಮಾಡುವ ಪದ್ಧತಿ

ಹಾವು ಸತ್ತು ಒಂದು ಗಂಟೆಯಾದರೂ ಸಿಬ್ಬಂದಿಗಳು ಮಾತ್ರ ಸ್ಥಳಕ್ಕೆ ಆಗಮಿಸಿಲ್ಲ. ಹಾವು ಸತ್ತ ತಕ್ಷಣ ಅದಕ್ಕೆ ಅಂತ್ಯಸಂಸ್ಕಾರ ಮಾಡಬೇಕು ಎನ್ನುವ ಪದ್ಧತಿಯಿದೆ. ಈ ಕಾರಣಕ್ಕಾಗಿ ಸ್ಥಳೀಯರು ದೇವಳದ ಸಿಬ್ಬಂದಿಗಳಿಗೆ ವಿಚಾರ ತಿಳಿಸಿದ್ದರು. ಆದರೆ, ಯಾವೊಬ್ಬನೂ ಸ್ಪಂದಿಸದ ಕಾರಣ ಆಡಳಿತ ಕಛೇರಿ ಮುಂದೆಯೇ ಮೃತಪಟ್ಟ ಹಾವನ್ನು ಇಟ್ಟಿದ್ದಾರೆ. ಈ ಕುರಿತು ಮಾತನಾಡಿದ ಸ್ಥಳೀಯರು, ‘ಸರ್ಪಸಂಸ್ಕಾರ ವಿಧಿಗೆ ಹಣ ಕೊಟ್ಟರೆ ಮಾತ್ರ ಅರ್ಚಕರು ಸಿಗುತ್ತಾರೆ. ಆದರೆ, ಕ್ಷೇತ್ರದಲ್ಲಿ ಆರಾಧಿಸಲ್ಪಡುವ ನಾಗನೇ ಸತ್ತು ಬಿದ್ದಾಗ ನಿಮಗೆ ಅರ್ಚಕರು ಸಿಗುತ್ತಿಲ್ಲ. ನಾಗದೇವರ ಅನ್ನ ತಿಂದೇ ಇಲ್ಲಿ ಎಲ್ಲರೂ ಬದುಕುತ್ತಿರುವುದು. ಹೀಗಿರುವಾಗ ನಾಗನಿಗೆ ಅಂತ್ಯಸಂಸ್ಕಾರ ನಡೆಸಲು ಮಾತ್ರ ಯಾರೂ ಇಲ್ಲ. ಕೊನೆಗೆ ಪುತ್ತೂರು ಸಹಾಯಕ ಆಯುಕ್ತರಿಗೆ ಕರೆ ಮಾಡಿದಾಗ ಅವರು ಸ್ಪಂದಿಸಿದ್ದಾರೆ. ದೇವಸ್ಥಾನದಲ್ಲಿ ಇಷ್ಟೆಲ್ಲಾ ಸಿಬ್ಬಂದಿಗಳು ಇರೋದು ಯಾಕೆ? ಎಂದು ಕ್ಷೇತ್ರದ ಸಿಬ್ಬಂದಿಗಳ ವಿರುದ್ಧ ಹರಿಹಾಯ್ದಿದ್ದಾರೆ. ಇನ್ನು ಸಹಾಯಕ ಆಯುಕ್ತರ ಆದೇಶದ ಬಳಿಕ ಅರ್ಚಕರು ನಾಗನಿಗೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us