ಗದಗದ ಲಕ್ಕುಂಡಿ ಅನೇಕ ಐತಿಹಾಸಿಕ ದೇಗುಲಗಳು, ಮೆಟ್ಟಿಲು ಬಾವಿಗಳ ತೊಟ್ಟಿಲು... ವಿಡಿಯೋ ನೋಡಿ

ಗದಗದ ಲಕ್ಕುಂಡಿ ಅನೇಕ ಐತಿಹಾಸಿಕ ದೇಗುಲಗಳು, ಮೆಟ್ಟಿಲು ಬಾವಿಗಳ ತೊಟ್ಟಿಲು… ವಿಡಿಯೋ ನೋಡಿ

ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಸಾಧು ಶ್ರೀನಾಥ್​

Updated on: Jan 06, 2024 | 12:31 PM

ದೇವಸ್ಥಾನಗಳ ಸ್ವರ್ಗ ಲಕ್ಕುಂಡಿಯಲ್ಲಿ ನೋಡಬಹುದಾದ ಅನೇಕ ರಚನೆಗಳಿವೆ. ಪ್ರಮುಖವಾಗಿ ಕಾಶಿ ವಿಶ್ವೇಶ್ವರ ದೇವಾಲಯವು ಚಾಲುಕ್ಯ ವಾಸ್ತುಶೈಲಿಯ ಅದ್ಭುತ ಉದಾಹರಣೆಯಾಗಿದೆ. ಅದ್ಭುತ ಕೆತ್ತನೆಗಳಿಂದ ಕೂಡಿರುವ ಲಕ್ಕುಂಡಿಯಲ್ಲಿ ಚಟೀರ ಬಾವಿ, ಕಣ್ಣೆ ಬಾವಿ ಹಾಗೂ ಮುಸುಕಿನ ಬಾವಿ ಅಂತಹ ಅನೇಕ ಮೆಟ್ಟಿಲು ಬಾವಿಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಅದು ಐತಿಹಾಸಿಕ ಲಕ್ಕುಂಡಿ ಗ್ರಾಮ. ಇದನ್ನು ಐತಿಹಾಸಿಕ ದೇವಸ್ಥಾನಗಳ ಸ್ವರ್ಗ ಅಂತಲೇ ಕರೀತಾರೆ. ಹಂಪಿಯಷ್ಟೇ ಪ್ರಾಮುಖ್ಯತೆ ಹೊಂದಿದೆ. ನೂರೊಂದು ದೇವಸ್ಥಾನ, ನೂರೊಂದು ಬಾವಿಗಳು ಇರೋ ಈ ಐತಿಹಾಸಿ ಗ್ರಾಮದಲ್ಲಿ ದೇವಸ್ಥಾನಗಳು ಇತಿಹಾಸವೇ ಸಾರುತ್ತವೆ. ವಿಶ್ವಪ್ರಸಿದ್ಧ ಹಂಪಿಗಿಂತ ಈ ಲಕ್ಕುಂಡಿ ಏನೂ ಕಮ್ಮಿ ಇಲ್ಲ. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾದ ದೇವಸ್ಥಾನ ಶಿಲ್ಪಕಲೆ ನೋಡಿದ್ರೆ ಬೆರಗಾಗಿ ಹೋಗ್ತೀರಾ. ಜೈನ್ ಜಿನಾಲಯಗಳು, ಹಿಂದೂ ದೇವಸ್ಥಾನಗಳ ಶಿಲ್ಪಕಲೆ ಕಣ್ಮುಂಬಿಕೊಳ್ಳು ನೀವು ಒಂದ್ಸಾರಿ ಇಲ್ಲಿಗೆ ಭೇಟಿ ನೀಡಿ. ದೇವಸ್ಥಾನಗಳ ತೊಟ್ಟಿಲಿನ ಸಮಗ್ರ ಚಿತ್ರಣ ಟಿವಿ9 ಡಿಜಿಟಲ್ ವಿಶೇಷ ಲೇಖನದಲ್ಲಿದೆ.

ಈ ಐತಿಹಾಸಿಕ ಲಕ್ಕುಂಡಿ ಗ್ರಾಮ ಇರೋದು ಗದಗ ತಾಲೂಕಿನಲ್ಲಿ. ಲಕ್ಕುಂಡಿ ಗದಗ ನಗರದಿಂದ 11 ಕಿಮೀ ದೂರದಲ್ಲಿದೆ. ಹುಬ್ಬಳ್ಳಿಯಿಂದ 65 ಕಿಲೋ ಮೀಟರ್ ದೂರದಲ್ಲಿದೆ. ಗೋವಾದಿಂದ ಹಂಪಿಗೆ ಹೋಗುವ ರಸ್ತೆಯಲ್ಲೆ ಈ ಲಕ್ಕುಂಡಿ ಗ್ರಾಮವಿದೆ. ಲಕ್ಕುಂಡಿ ಹಂಪಿಯಿಂದ 80 ಕಿಲೋ ಮೀಟರ್ ದೂರದಲ್ಲಿದೆ. ಹೀಗಾಗಿ ವಿದೇಶಿಗರು ಸೇರಿದಂತೆ ಸಾಕಷ್ಟು ಪ್ರವಾಸಿಗಳು ಈ ದೇವಾಲಯಗಳ ಸ್ವರ್ಗ ನೋಡಿ ಕಣ್ಮುಂಬಿಕೊಳ್ತಾರೆ.

ಲಕ್ಕುಂಡಿಯನ್ನು ದೇವಾಲಯಗಳ ಸ್ವರ್ಗವೆಂದು ಕರೆಯುತ್ತಾರೆ. ಶಾಸನಗಳ ಪ್ರಕಾರ ಲಕ್ಕುಂಡಿಯನ್ನು ಮೊದಲು ‘ಲೋಕಿ ಗುಂಡಿ’ ಎಂದೂ ಕರೆಯುಲಾಗುತ್ತಿತ್ತು. ಇದು ಸಾವಿರ ವರ್ಷಗಳ ಹಿಂದೆಯೇ ಪ್ರಮುಖ ನಗರವಾಗಿತ್ತು. ಕಾಶಿ ವಿಶ್ವನಾಥ ದೇವಾಲಯ ಅತ್ಯಂತ ಅಲಂಕೃತ ಮತ್ತು ವಿಸ್ತಾರವಾಗಿ ನಿರ್ಮಿಸಲ್ಪಟ್ಟಿದೆ. ಕರ್ನಾಟಕದ ಗದಗ ಜಿಲ್ಲೆಯಲ್ಲಿರುವ ಲಕ್ಕುಂಡಿ ಗ್ರಾಮದ ಕುರಿತು ಬಹುಶಃ ಅನೇಕರಿಗೆ ತಿಳಿದಿರಿಲಿಕ್ಕಿಲ್ಲ.

ಈ ಗ್ರಾಮ ಒಂದು ಐತಿಹಾಸಿಕ ವೈಶಿಷ್ಟ್ಯವುಳ್ಳ ಗ್ರಾಮವಾಗಿದೆ. ಅದ್ಭುತ ಶಿಲ್ಪ ಕಲೆಗಳಿಂದ ಕೂಡಿದ ಅನೇಕ ಹಿಂದು ಹಾಗೂ ಜೈನ ದೇವಾಲಯಗಳ ತವರೂರಾಗಿದೆ. ಲಕ್ಕುಂಡಿ ಗ್ರಾಮದಲ್ಲಿ ನೂರೊಂದು ದೇವಸ್ಥಾನ, ನೂರೊಂದು ಬಾವಿಗಳು ಇವೆ. ಈಗ ಇರೋದು ಕೇವಲ 40-50 ಮಾತ್ರ. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ದೇವಾಲಯಗಳು ನಿರ್ಮಾಣ ಮಾಡಲಾಗಿದೆ ಎಂದು ಇತಿಹಾಸ ಹೇಳಿದೆ.

ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಜೈನ ಜಿನಾಲಯಗಳು ನಿರ್ಮಾಣ ಮಾಡಿದ್ದಾರೆ. ದೇವಸ್ಥಾನಗಳು ನೋಡೋಕೆ ಒಂದಕ್ಕಿಂತ ಒಂದು ಅಂದ ಚೆಂದವಾಗಿವೆ. ಒಂದೊಂದು ದೇವಾಲಯಗಳಲ್ಲೂ ಶಿಲ್ಪಿಗಳ ಕೈಯಲ್ಲಿ ಅರಳಿ ಶಿಲ್ಪಕಲೆ ನೋಡಿದ್ರೆ ಬೆರಗಾದವರೇ ಇಲ್ಲ. ಇಲ್ಲಿಗೆ ಬೇಟಿ ನೀಡಿ ಒಮ್ಮೆ ಸುಂದರ ದೇವಸ್ಥಾನಗಳು ನೋಡಿದ್ರೆ ಮನಸ್ಸಿಗೆ ಖುಷಿ, ಆನಂದ, ನೆಮ್ಮದಿ ನೀಡುತ್ತವೆ. ಈ ದೇವಾಲಯಗಳ ಬಗ್ಗೆ ಇತಿಹಾಸಕಾರರು ಹೇಳೋದು ಹೀಗೆ.

ಲಕ್ಕುಂಡಿಯಲ್ಲಿನ ಕೆಲವು ದೇವಾಲಯಗಳೆಂದರೆ ಜೈನ್ ಜಿನಾಲಯಗಳು, ಹಲಗುಂದ ಬಸವಣ್ಣ ದೇಗುಲ, ಲಕ್ಷ್ಮೀನಾರಾಯಣ ದೇಗುಲ, ಮಲ್ಲಿಕಾರ್ಜುನ ದೇಗುಲ, ಮಣಿಕೇಶವ ದೇಗುಲ, ಕಾಶಿ ವಿಶ್ವನಾಥ ದೇಗುಲ, ವಿರೂಪಾಕ್ಷ ದೇಗುಲ. ಇಲ್ಲಿರುವ ಹೆಚ್ಚಿನ ದೇವಸ್ಥಾನವು ಶಿವನ ದೇಗುಲವೇ ಆಗಿದೆ. ಸುಂದರ ಶಿಲ್ಪಕಲೆಯ ವಿಸ್ಮಯಕರ ಲಕ್ಕುಂಡಿ ಅಂತಲೂ ಕರೀತಾರೆ. ಭವ್ಯ ಕನ್ನಡ ನಾಡಿನ ಪರಂಪರೆಯ ಕುರಿತು ಹೆಮ್ಮೆ ಇರುವ ಜನರಿಗೆ ಆಕರ್ಷಕ ತಾಣವಾಗಿ ಲಕ್ಕುಂಡಿ ಕಂಡುಬರುತ್ತದೆ. ಹುಬ್ಬಳ್ಳಿ, ಹೊಸಪೇಟೆ, ಕೊಪ್ಪಳ್ಳ, ಹುಬ್ಬಳ್ಳಿ, ಗದಗಿನಿಂದ ಸಾಕಷ್ಟು ಬಸ್ಸುಗಳು ಲಕ್ಕುಂಡಿಗೆ ತೆರಳಲು ದೊರೆಯುತ್ತವೆ.

ಕೆಲ ದೇವಸ್ಥಾನಗಳು ಪುರಾತತ್ವ ಇಲಾಖೆಯಡಿ ಇರೋದ್ರಿಂದ ರಕ್ಷಣೆಯಲ್ಲಿವೆ. ಇನ್ನೂ ಹಲವಾರು ದೇವಸ್ಥಾನಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಈಗ ಗದಗ ಜಿಲ್ಲೆಯವರೇ ಆದ ಎಚ್ ಕೆ ಪಾಟೀಲರು ಪ್ರವಾಸೋದ್ಯಮ ಸಚಿವರಾದ ಬಳಿಕ ಲಕ್ಕುಂಡಿ ಅಭಿವೃದ್ಧಿಗೆ ಮುಂದಾಗಿದ್ದಾರೆ. ಈಗಾಗಲೇ ಲಕ್ಕುಂಡಿ ಗ್ರಾಮದಲ್ಲಿ ಐತಿಹಾಸಿಕ ದೇವಸ್ಥಾನಗಳ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿದ್ದಾರೆ.

ಇದನ್ನೂ ಓದಿ: ಮದುವೆ, ಸಂತಾನ ಭಾಗ್ಯ, ಮನೆ ಕಟ್ಟುವ …ಇಷ್ಟಾರ್ಥ ಸಿದ್ಧಿಗಾಗಿ ಲಜ್ಜಾಗೌರಿಗೆ ನಡೆಯುತ್ತೆ ವಿಶೇಷ ಪೂಜೆ! ಈ ಸುಕ್ಷೇತ್ರದ ಮಹಿಮೆ ಏನು?

ಸಚಿವರಾಗಿ ಆರೇ ತಿಂಗಳಲ್ಲಿ ಎಚ್ ಕೆ ಪಾಟೀಲರು ಲಕ್ಕುಂಡಿ ಪರಂಪರಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಿದ್ದು, ಮೂಲಭೂತ ಸೌಕರ್ಯ ಸೇರಿದಂತೆ ಲಕ್ಕುಂಡಿ ಸಮಗ್ರ ಅಭಿವೃದ್ಧಿಗೆ 800 ಕೋಟಿ ಮೊತ್ತದ ಯೋಜನೆ ತಯಾರು ಮಾಡಲಾಗಿದೆ. ಮುಂದಿನ ಬಜೆಟ್ ನಲ್ಲಿ ಈ ಯೋಜನೆಗೆ ಅನುದಾನ ದೊರೆಯಲಿದೆ. ಈ ಮೂಲಕ ಪ್ರವಾಸಿಗರನ್ನು ಸೆಳೆಯಲು ಲಕ್ಕುಂಡಿ ಸಮಗ್ರ ಅಭಿವೃದ್ಧಿ ಮಾಡಲು ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ವಿಶೇಷ ಕಾಳಜಿ ತೋರಿದ್ದಾರೆ ಅಂತ ಲಕ್ಕುಂಡಿ ಗ್ರಾಮದ ಜನ್ರು ಹೇಳಿದ್ದಾರೆ. ಲಕ್ಕುಂಡಿ ಯುನೆಸ್ಕೋ ಪಟ್ಟಿಗೆ ಸೇರಿಸಲು ಸರ್ಕಾರ ಪ್ರಯತ್ನ ಮಾಡುತ್ತಿದೆ.

ಲಕ್ಕುಂಡಿಯಲ್ಲಿ ಪ್ರಮುಖವಾಗಿ ನೋಡಬಹುದಾದ ರಚನೆಗಳೆಂದರೆ ಕಾಶಿ ವಿಶ್ವೇಶ್ವರ ದೇವಾಲಯ, ಬ್ರಹ್ಮ ಜೀನಾಲಯ, ಮೆಟ್ಟಿಲು ಬಾವಿ ಹಾಗೂ ನನ್ನೇಶ್ವರ ದೇವಾಲಯ. ಅದರಲ್ಲೂ ವಿಶೇಷವಾಗಿ ಕಾಶಿ ವಿಶ್ವೇಶ್ವರ ದೇವಾಲಯವು ಚಾಲುಕ್ಯ ವಾಸ್ತುಶೈಲಿಯ ಅದ್ಭುತ ಉದಾಹರಣೆಗಳ ಪೈಕಿ ಒಂದಾಗಿದೆ. ಅದ್ಭುತ ಕೆತ್ತನೆಗಳಿಂದ ಕೂಡಿರುವ ಲಕ್ಕುಂಡಿಯ ಅನೇಕ ಮೆಟ್ಟಿಲು ಬಾವಿಗಳ ಪೈಕಿ ಪ್ರವಾಸಿಗರನ್ನು ಆಕರ್ಷಿಸುವ ಕೆಲವು ಬಾವಿಗಳೆಂದರೆ ಚಟೀರ ಬಾವಿ, ಕಣ್ಣೆ ಬಾವಿ ಹಾಗೂ ಮುಸುಕಿನ ಬಾವಿಗಳು. ಇನ್ನೂ ಕಾಶಿ ವಿಶ್ವೇಶ್ವರ ದೇವಾಲಯವು ಭವ್ಯವಾದ ಕೆತ್ತನೆಗಳಿಂದ ಕೂಡಿದ್ದು ಅಂದಿನ ಕುಶಲ ಕರ್ಮಿಗಳ ನೈಪುಣ್ಯತೆಯನ್ನು ತೋರಿಸುತ್ತದೆ. ನೀವು ಒಮ್ಮೆ ಲಕ್ಕುಂಡಿ ಗ್ರಾಮಕ್ಕೆ ಭೇಟಿ ಇಲ್ಲಿ ದೇವಾಲಯಗಳ ಸ್ವರ್ಗ ನೋಡಿ ಆನಂದಿಸಿ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ