ಕರ್ನಾಟಕ ಸರ್ಕಾರ (Government of Karnataka) ಘೋಷಿಸಿರುವ ವಾರಾಂತ್ಯ ಕರ್ಫ್ಯೂನ ಎರಡನೇ ಕಂತು ಸೋಮವಾರ ಬೆಳಗ್ಗೆ ಕೊನೆಗೊಂಡಿತು. ರವಿವಾರ ಕೊನೆಗೊಂಡ ಸೋಮವಾರ ಉದಯಿಸುತ್ತಿದ್ದಂತೆ ರಾಜ್ಯದಾದ್ಯಂತ ಜನರ ಬದುಕು ಸಾಮಾನ್ಯಗೊಳ್ಳಲು ಆರಂಭಿಸುತ್ತದೆ. ಬೆಂಗಳೂರು (Bengaluru) ಮಹಾನಗರದಲ್ಲಿ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ವಾರಾಂತ್ಯದಲ್ಲಿ ಅಂದರೆ ಶುಕ್ರವಾರ ಕೆಲಸ ಮುಗಿಸಿಕೊಂಡು ತಮ್ಮ ತಮ್ಮ ಊರುಗಳಿಗೆ ಹೋಗಿದ್ದ ಜನ ಸೋಮವಾರ ಬೆಳಗ್ಗೆ ಬಸ್, ರೈಲುಗಳ ಮೂಲಕ ಬೆಂಗಳೂರಿಗೆ ವಾಪಸ್ಸು ಬರಲಾರಂಭಿಸಿದ್ದರು. ಈ ವಿಡಿಯೋನಲ್ಲಿ ಮೆಜೆಸ್ಟಿಕ್ (Majestic) ಬಿ ಎಮ್ ಟಿ ಸಿ ಬಸ್ ನಿಲ್ದಾಣದಲ್ಲಿನ ದೃಶ್ಯ ನಿಮಗೆ ಕಾಣುತ್ತಿದೆ. ಕೇವಲ ಬೇರೆ ಬೇರೆ ಊರುಗಳಿಂದ ಬಂದವರು ಮಾತ್ರವಲ್ಲ, ನಗರದ ನಿವಾಸಿಗಳು ತಮ್ಮ ಕೆಲಸದ ಸ್ಥಳಗಳಿಗೆ ಹೋಗಲು ಬಸ್ ನಿಲ್ದಾಣಕ್ಕೆ ಬಂದರು. ಶಾಲಾ ಕಾಲೇಜುಗಳಿಗೆ ಹೋಗಲು ನಗರ ಸಾರಿಗೆ ಬಸ್ಗಳನ್ನು ಹತ್ತುತ್ತಿರುವ ವಿದ್ಯಾರ್ಥಿಗಳನ್ನು ಸಹ ನಾವು ನೋಡಬಹುದು.
ವೀಕೆಂಡ್ ಕರ್ಫ್ಯೂ ಸಾಮಾನ್ಯ ಜನಜೀವನದ ಮೇಲೆ ಭಾರಿ ಪರಿಣಾಮ ಬೀರಿರುವುದು ಸತ್ಯ. ಆದರೆ, ಸರ್ಕಾರ ಏನೂ ಮಾಡುವಂತಿಲ್ಲ. ಪಿಡುಗನ್ನು ನಿಯಂತ್ರಣದಲ್ಲಿಡಬೇಕಾದರೆ ಈ ಕ್ರಮ ಅನಿವಾರ್ಯ ಮತ್ತು ಅವಶ್ಯಕ.
ರಾಜ್ಯದಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಮವಾರದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದು ವಿಶೇಷ ಸಭೆಯನ್ನು ನಡೆಸಿದರು. ಅವರ ಸಂಪುಟ ಸಚಿವರು, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ತಜ್ಞರು ಸಭೆಯಲ್ಲಿ ಪಾಲ್ಗೊಂಡಿದ್ದರು.
ರಾಜ್ಯಾದ್ಯಂತ ಲಾಕ್ಡೌನ್ ಹೇರುವ ನಿರ್ಧಾರವನ್ನು ಸರ್ಕಾರ ಪ್ರಕಟಿಸಬಹುದು ಎಂಬ ಆತಂಕ ಜನರಲ್ಲಿತ್ತು. ಆದರೆ, ಸದ್ಯಕ್ಕೆ ಸರ್ಕಾರ ಅಂಥ ನಿರ್ಧಾರವೇನೂ ಪ್ರಕಟಿಸಿಲ್ಲ. ಅದರ ಬಗ್ಗೆ ಶುಕ್ರವಾರದಂದು ನಿರ್ಣಯಕ್ಕೆ ಬರಲಾಗುವುದು ಎಂದು ಸಭೆಯ ನಂತರ ಕಂದಾಯ ಸಚಿವ ಆರ್ ಅಶೋಕ ಹೇಳಿದರು.
ಇದನ್ನೂ ಓದಿ: 10 ಬಿಲಿಯನ್ ವೀಕ್ಷಣೆ ಪಡೆದ ಮೊದಲ ಯುಟ್ಯೂಬ್ ವಿಡಿಯೋ ಹೆಗ್ಗಳಿಕೆ ಗಳಿಸಿಕೊಂಡ ಬೇಬಿ ಶಾರ್ಕ್ ಡ್ಯಾನ್ಸ್ ವಿಡಿಯೋ