ಹೆಸ್ಕಾಂ ಎಇಇ ಕಿರಣ್ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ!
ಹುಬ್ಬಳ್ಳಿಯ ಹೆಸ್ಕಾಂ ಎಇಇ ಕಿರಣ್ ಕುಮಾರ್ ಹಾಗೂ ಬೀದರ್‌ನ ಕೃಷಿ ಇಲಾಖೆ ಅಧಿಕಾರಿ ಮಾಣಿಕರಾವ್ ಶೇರಿಕಾರ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಒಟ್ಟು ನಾಲ್ಕಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯ ನಡೆದಿದ್ದು, ಅಧಿಕಾರಿಗಳು ಆಸ್ತಿ ಪಾಸ್ತಿ ಮತ್ತು ಹಣಕಾಸಿನ ಪ್ರಮುಖ ದಾಖಲೆಗಳನ್ನು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿ, ಸೆಪ್ಟೆಂಬರ್ 22: ಹುಬ್ಬಳ್ಳಿಯಲ್ಲಿ ಹೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) ಕಿರಣ್ ಕುಮಾರ್ ಅವರ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರ ಆರೋಪದಡಿ ಈ ದಾಳಿಯನ್ನು ನಡೆಸಲಾಗಿದ್ದು, ಒಟ್ಟು ನಾಲ್ಕು ಕಡೆಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯ ಕೈಗೊಳ್ಳಲಾಗಿದೆ. ಹುಬ್ಬಳ್ಳಿ ನಗರದ ಅಕ್ಷಯ ಕಾಲೋನಿಯಲ್ಲಿರುವ ಕಿರಣ್ ಕುಮಾರ್ ಅವರ ನಿವಾಸ, ಹಾಗೆಯೇ ಹೆಸ್ಕಾಂ ಕಚೇರಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಈ ಕಾರ್ಯಾಚರಣೆ ನಡೆದಿದೆ. ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ಈ ಮಹತ್ವದ ಕಾರ್ಯಾಚರಣೆ ನಡೆಯುತ್ತಿದ್ದು, ಲೋಕಾಯುಕ್ತ ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆಯಲ್ಲಿ ನಿರತವಾಗಿದೆ.
ಅಧಿಕಾರಿಗಳು ದಾಳಿ ನಡೆಸಿದ ಸ್ಥಳಗಳಲ್ಲಿ ಸಿಕ್ಕಿರುವ ಮಹತ್ವದ ದಾಖಲೆಪತ್ರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ಆಸ್ತಿ ವಿವರಗಳು, ಬ್ಯಾಂಕ್ ಖಾತೆಗಳು, ಹಾಗೂ ಇತರ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ತಪಾಸಣೆ ಮಾಡಲಾಗುತ್ತಿದೆ. ಭ್ರಷ್ಟಾಚಾರ ನಿರ್ಮೂಲನೆಯ ನಿಟ್ಟಿನಲ್ಲಿ ಲೋಕಾಯುಕ್ತ ಸಂಸ್ಥೆಯು ಕೈಗೊಂಡಿರುವ ಪ್ರಮುಖ ಹೆಜ್ಜೆಯಾಗಿದೆ.
ಬೀದರ್‌ನಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ
ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಬೀದರ್‌ನ ಕೃಷಿ ಇಲಾಖೆ ಅಧಿಕಾರಿ (ಸಹಾಯಕ ನಿರ್ದೇಶಕ) ಮಾಣಿಕರಾವ್ ಶೇರಿಕಾರ ಅವರ ನಿವಾಸ ಹಾಗೂ ಫಾರ್ಮ್‌ಹೌಸ್‌ಗಳ ಮೇಲೆ ಲೋಕಾಯುಕ್ತ ಪೊಲೀಸರು ಬೆಳ್ಳಂಬೆಳಗ್ಗೆ ಭರ್ಜರಿ ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್‌ಪಿ ಸಿದ್ದರಾಜು ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಹನುಮಂತರಾಯ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ಬೀದರ್ ನಗರದ ಹಕ್ಕ್ ಕಾಲೋನಿಯಲ್ಲಿರುವ ನಿವಾಸ, ಹುಮ್ನಾಬಾದ್‌ನ ಟೀಚರ್ ಕಾಲೋನಿ ಮನೆ ಹಾಗೂ ಚಿಟಗುಪ್ಪಾ ತಾಲೂಕಿನ ಮುತ್ತಂಗಿ ಗ್ರಾಮದಲ್ಲಿರುವ ಫಾರ್ಮ್‌ಹೌಸ್‌ಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, ಅಧಿಕಾರಿಗಳು ಪ್ರಮುಖ ಆಸ್ತಿ ದಾಖಲೆಗಳು ಹಾಗೂ ಅಕ್ರಮ ಸಂಪತ್ತಿನ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
