ಎಲ್​ಪಿಜಿ ಸಿಲಿಂಡರ್ ಬೆಲೆ ಏರಿಕೆಯಿಂದ ಹೋಟೆಲ್​ ಮಾಲೀಕರಲ್ಲಿ ಆತಂಕ, ಗ್ರಾಹಕರಿಗೆ ತಿಂಡಿಗಳ ಬೆಲೆ ಏರಿಕೆ ಟೆನ್ಶನ್

Edited By:

Updated on: Mar 07, 2026 | 9:37 AM

ಇಸ್ರೇಲ್-ಇರಾನ್ ಯುದ್ಧದ ಪರಿಣಾಮವಾಗಿ ಭಾರತದಲ್ಲಿ ಎಲ್​ಪಿಜಿ ಸಿಲಿಂಡರ್ ಬೆಲೆ ಏರಿಕೆ ಕಂಡಿದೆ. ವಾಣಿಜ್ಯ ಸಿಲಿಂಡರ್ ದರ 115 ರೂಪಾಯಿ ಹೆಚ್ಚಳವಾಗಿದ್ದು, ಮೈಸೂರು ಹೋಟೆಲ್ ಮಾಲೀಕರಲ್ಲಿ ಆತಂಕ ಮನೆ ಮಾಡಿದೆ. ಪೂರೈಕೆ ವ್ಯತ್ಯಯವೂ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಲಕ್ಷಾಂತರ ಜನರ ಜೀವನೋಪಾಯಕ್ಕೆ ಅಪಾಯ ಎದುರಾಗಿದೆ.

ಮೈಸೂರು, ಮಾರ್ಚ್ 7: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪ್ರತಿಕೂಲ ಪರಿಣಾಮ ಭಾರತದ ಮೇಲೆ ಬೀರಲು ಪ್ರಾರಂಭವಾಗಿದೆ. ಎಲ್​ಪಿಜಿ ಸಿಲಿಂಡರ್ ದರ ಏರಿಕೆಯಾಗಿದ್ದು, ವಿಶೇಷವಾಗಿ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಬೆಲೆ 115 ರೂಪಾಯಿ ಹೆಚ್ಚಳವಾಗಿದೆ. ಈ ಬೆಲೆ ಏರಿಕೆ ಮತ್ತು ಸಿಲಿಂಡರ್ ಪೂರೈಕೆಯಲ್ಲಿನ ವ್ಯತ್ಯಯ ಮೈಸೂರಿನ ಹೋಟೆಲ್ ಉದ್ಯಮಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ವಾಣಿಜ್ಯ ಸಿಲಿಂಡರ್‌ಗಳ ಬೆಲೆ ದಿಢೀರ್ ಹೆಚ್ಚಳವಾಗಿದ್ದು, ಜೊತೆಗೆ ಅಗತ್ಯಕ್ಕೆ ತಕ್ಕಂತೆ ಪೂರೈಕೆ ಸಹ ಆಗುತ್ತಿಲ್ಲ ಎಂದು ಹೋಟೆಲ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ. ಹಿಂದೆ ಹೇಳಿದ ತಕ್ಷಣ ಸಿಗುತ್ತಿದ್ದ ಸಿಲಿಂಡರ್‌ಗಳು ಈಗ ವಿಳಂಬವಾಗಿ ತಲುಪುತ್ತಿವೆ. ಯುದ್ಧದ ಪರಿಸ್ಥಿತಿ ಮತ್ತು ಪೂರೈಕೆ ಕೊರತೆಯನ್ನೇ ಇದಕ್ಕೆ ಕಾರಣವಾಗಿ ನೀಡಲಾಗುತ್ತಿದೆ. ಮೈಸೂರಿನಂತಹ ನಗರದಲ್ಲಿ ಹೋಟೆಲ್ ಉದ್ಯಮಕ್ಕೆ ದಿನಕ್ಕೆ 20-25 ಸಾವಿರ ಸಿಲಿಂಡರ್‌ಗಳು ಬೇಕಾಗುತ್ತವೆ. ಗ್ಯಾಸ್ ಪೂರೈಕೆಯಲ್ಲಿನ ವ್ಯತ್ಯಾಸದಿಂದ ಉದ್ಯಮದ ಮೇಲೆ ಅವಲಂಬಿತವಾಗಿರುವ ಲಕ್ಷಾಂತರ ಜನರ ಬದುಕು ಅನಿಶ್ಚಿತತೆಗೆ ಒಳಗಾಗಿದೆ.

ಮತ್ತೊಂದೆಡೆ, ಪದೇಪದೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಹೋಟೆಲ್​ಗಳಲ್ಲಿ ತಿಂಡಿಗಳ ಬೆಲೆ ಏರಿಕೆಯಾಗುವ ಆತಂಕವೂ ಎದುರಾಗಿದೆ. ಒಂದು ವೇಳೆ ಹೀಗಾದರೆ ಗ್ರಾಹಕರ ಜೇಬಿಗೂ ಹೊರೆಯಾಗಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More