ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ: ಕೋಮು ಭಾವನೆ ಕೆರಳಿಸೋದು ಸರಿಯಲ್ಲ, ಸಚಿವ ಮಹದೇವಪ್ಪ ಕಿಡಿ

Updated on: Sep 09, 2025 | 12:37 PM

ಮದ್ದೂರಿನಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟದ ಘಟನೆಯನ್ನು ಸಚಿವ ಎಚ್.ಸಿ. ಮಹದೇವಪ್ಪ ಅವರು ತೀವ್ರವಾಗಿ ಖಂಡಿಸಿದ್ದಾರೆ. ಧಾರ್ಮಿಕ ಆಚರಣೆಗಳ ರಾಜಕೀಕರಣವನ್ನು ಅವರು ವಿರೋಧಿಸಿದ್ದು, ಕೋಮು ಸೌಹಾರ್ದತೆಗೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ಖಂಡಿಸುವುದಾಗಿ ಹೇಳಿದ್ದಾರೆ. ಸರ್ಕಾರವು ಈ ಘಟನೆಯ ಕುರಿತು ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.

ಬೆಂಗಳೂರು, ಸೆಪ್ಟೆಂಬರ್ 9: ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟದ ಘಟನೆ ಕುರಿತು ಸಚಿವ ಎಚ್​​ಸಿ ಮಹದೇವಪ್ಪ ಪ್ರತಿಕ್ರಿಯಿಸಿದ್ದು, ಧಾರ್ಮಿಕ ಆಚರಣೆಗಳನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸುವುದನ್ನು ವಿರೋಧಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೋಮು ಸೌಹಾರ್ದತೆಯನ್ನು ಕಾಪಾಡುವುದು ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವವರು ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಂಡು ಜನರ ಜೀವನದಲ್ಲಿ ಚೆಲ್ಲಾಟ ಆಡಬಾರದು ಎಂದು ಅವರು ಹೇಳಿದ್ದಾರೆ.

ಸಾರ್ವಜನಿಕ ವ್ಯಕ್ತಿಗಳು ಹಾಗೂ ಸಂಘಟನೆಗಳು ಸಾಮಾಜಿಕ ಜವಾಬ್ದಾರಿಯನ್ನು ಅರಿತು ವರ್ತಿಸಬೇಕು ಎಂದು ಒತ್ತಿ ಹೇಳಿದ್ದಾರೆ. ಕೋಮು ಭಾವನೆಗಳನ್ನು ಕೆರಳಿಸುವುದು, ಉದ್ರೇಕಕಾರಿ ಭಾಷಣಗಳನ್ನು ಮಾಡುವುದು ಮತ್ತು ಭಾವನಾತ್ಮಕ ವಿಷಯಗಳನ್ನು ಪ್ರಚೋದಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಈ ರೀತಿಯ ಘಟನೆಗಳನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು ತಮ್ಮ ಮಾತಿನ ಜವಾಬ್ದಾರಿಯನ್ನು ಅರಿತು ಮಾತನಾಡಬೇಕು. ಧಾರ್ಮಿಕ ತೀವ್ರವಾದ, ಕೋಮು ಪ್ರಚೋದನೆ ಪ್ರವೃತ್ತಿ ಯಾವುದೇ ಧರ್ಮದವರು ಮಾಡಿದರೂ ಖಂಡನೀಯ. ಒಂದು ಧಾರ್ಮಿಕ ಆಚರಣೆಯನ್ನ ಒಂದು ರಾಜಕೀಯ ವಿಷಯ ತಗೊಂಡು ಗೊಂದಲ ಉಂಟುಮಾಡಿದರೆ ಇದು ಸರಿಯಾದ ಕ್ರಮ ಅಲ್ಲ ಎಂದು ಮಹದೇವಪ್ಪ ಹೇಳಿದ್ದಾರೆ.

ಇದಕ್ಕೂ ಮುನ್ನ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸಂದೇಶ ಪ್ರಕಟಿಸಿದ್ದ ಅವರು, 2016 ರಿಂದ 2018 ರ ಅವಧಿಯಲ್ಲಿ ನುಡಿದಂತೆ ನಡೆಯುತ್ತಿದ್ದ ಕಾಂಗ್ರೆಸ್ ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಅಪಪ್ರಚಾರ ನಡೆಸಲು ಹೂಡಿದ ತಂತ್ರ ಮತ್ತು ಕುತಂತ್ರವೇ, ‘‘ಹಿಂದೂ ವಿರೋಧಿ ಸರ್ಕಾರ’’ ಎಂಬುದು ಎಂದು ಉಲ್ಲೇಖಿಸಿದ್ದರು.

ಮಹದೇವಪ್ಪ ಟ್ವೀಟ್


ಈ ಕುತಂತ್ರ ಆರಂಭಗೊಂಡ ದಿನದಿಂದ ಹಲವು ಅಮಾಯಕರ ಸಾವುಗಳು ಸಂಭವಿಸಿದವು. ಶಿರಸಿಯ ಪರೇಶ್ ಮೇಸ್ತಾ ಎಂಬ ಯುವಕನಿಂದ ಆರಂಭಗೊಂಡು ಶರತ್ ಮಡಿವಾಳ ಎಂಬ ಯುವಕನವರೆಗೆ ಜರುಗಿದ ಸಾವುಗಳು ಮತ್ತು ಅವುಗಳ ವಿಷಯದಲ್ಲಿ ಬಿಜೆಪಿಯು ಮಾಡಿದ ಶವ ರಾಜಕೀಯವು ಇಂದಿಗೂ ನಮ್ಮ ಕಣ್ಣ ಮುಂದಿದೆ.

ಪರೇಶ್ ಮೇಸ್ತಾ ವಿಷಯದಲ್ಲಿ ಸಿಬಿಐ ತನಿಖೆಯು ಜರುಗಿ ಕಡೆಗೆ ಅದು ಕೊಲೆಯಲ್ಲ, ಸಹಜ ಸಾವು ಎಂದು ವರದಿ ಬಂದಿತು. ಇನ್ನು ಚುನಾವಣೆ ಸಂದರ್ಭದಲ್ಲಿ ಸತ್ತವರ ಮನೆಯನ್ನು ಬಳಸಿ ರಾಜಕೀಯ ಮಾಡಿದ ಬಿಜೆಪಿಗರು ನಂತರ ಅತ್ತ ಸುಳಿಯಲೂ ಇಲ್ಲ. ಇದನ್ನು ನಾನಲ್ಲ ಬದಲಿಗೆ ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರೇ ಹಿಂದೆ ಹೇಳಿದ್ದಾರೆ. ಇದೀಗ ನಾಡಿನ ಐಕ್ಯತೆಗಾಗಿ ಮಾಡಬೇಕಿದ್ದ ದಸರಾ ಮತ್ತು ಗಣೇಶ ಹಬ್ಬವನ್ನೂ ಕೂಡಾ ಧರ್ಮದ ಕಲಹಕ್ಕೆ ಬಳಸಿಕೊಳ್ಳುವ ಕೆಲಸವನ್ನು ಮಾಡಲು ಆರಂಭಿಸಿರುವ ಬಿಜೆಪಿಗರು ಚುನಾವಣಾ ಅಧಿಕಾರವನ್ನು ಪಡೆಯಲು ‘‘ಜನಪರ ಪ್ರಣಾಳಿಕೆಗಳನ್ನು’’ ಮುಂದೆ ತಾರದೇ ಕೇವಲ ಹಿಂದೂ – ಮುಸ್ಲಿಂ ಜಗಳವನ್ನು ಮುನ್ನಲೆಗೆ ತರುತ್ತಿರುವುದನ್ನು ನೋಡಿದರೆ ಇವರಿಗೆ ಯಾವುದೇ ಸಾಮಾಜಿಕ ಮತ್ತು ರಾಜಕೀಯ ಜವಾಬ್ದಾರಿ ಇಲ್ಲ ಎಂಬ ಸಂಗತಿಯು ಸ್ಪಷ್ಟವಾಗಿ ಅರಿವಾಗುತ್ತಿದೆ ಎಂದು ಮಹದೇವಪ್ಪ ಟ್ವೀಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ