ಗಂಗೆ ಕಲುಷಿತವಾಗಿಲ್ಲ; ಮಹಾಕುಂಭದ ಬಗ್ಗೆ ವಿಜ್ಞಾನಿ ಡಾ. ಅಜಯ್ ಕುಮಾರ್ ಸೋಂಕರ್ ಹೇಳಿದ್ದೇನು?
ಪ್ರಯಾಗ್‌ರಾಜ್‌ನಲ್ಲಿ ಗಂಗಾ ಮತ್ತು ಯಮುನಾ ನದಿಗೆ ಸಂಸ್ಕರಿಸದ ಕೊಳಚೆನೀರನ್ನು ಬಿಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಮಹಾಕುಂಭದ ವಿವಿಧ ಸ್ಥಳಗಳಲ್ಲಿ ಹೆಚ್ಚಿನ ಪ್ರಮಾಣದ ಮಲ ಬ್ಯಾಕ್ಟೀರಿಯಾ ಮತ್ತು ಫೆಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಇವೆ. ಇಲ್ಲಿನ ನೀರಿನ ಬಯೋಕೆಮಿಕಲ್ ಆಕ್ಸಿಜನ್ ಡಿಮ್ಯಾಂಡ್ ಸ್ನಾನಕ್ಕೆ ಯೋಗ್ಯವಾಗಿಲ್ಲ. ಕುಂಭಮೇಳದಲ್ಲಿ ಕೋಟಿಗಟ್ಟಲೆ ಜನರು ಸ್ನಾನ ಮಾಡುವುದರಿಂದ ಫೆಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಹೆಚ್ಚಾಗುತ್ತದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ವರದಿಯಲ್ಲಿ ಹೇಳಿತ್ತು. ಈ ಬಗ್ಗೆ ಇದೀಗ ಚರ್ಚೆಗಳು ಶುರುವಾಗಿವೆ.
ನವದೆಹಲಿ: ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭದ ತ್ರಿವೇಣಿ ಸಂಗಮದಲ್ಲಿ ದಿನವೂ ಕೋಟ್ಯಂತರ ಜನರು ಪುಣ್ಯಸ್ನಾನ ಮಾಡುತ್ತಿದ್ದಾರೆ. ಇದರಿಂದಾಗಿ ಗಂಗಾ ನದಿಯ ನೀರು ಕಲುಷಿತವಾಗಿದ್ದು, ಅದರಲ್ಲಿ ಮಲ ಬ್ಯಾಕ್ಟೀರಿಯಾ ಹೆಚ್ಚಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಎನ್ಜಿಟಿಗೆ ವರದಿ ಸಲ್ಲಿಸಿತ್ತು. ಆದರೆ, ಈ ವರದಿಯನ್ನು ನಿರಾಕರಿಸಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ವಿಜ್ಞಾನಿ ಡಾ. ಅಜಯ್ ಕುಮಾರ್ ಸೋಂಕರ್ ಗಂಗಾ ನೀರಿನ ಶುದ್ಧತೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮಹಾ ಕುಂಭದ ಸಮಯದಲ್ಲಿ 57 ಕೋಟಿಗಿಂತಲೂ ಹೆಚ್ಚು ಭಕ್ತರು ಗಂಗಾ ನದಿಯಲ್ಲಿ ಸ್ನಾನ ಮಾಡಿದ್ದರೂ ಸಹ ಅದು ಕಲುಷಿತವಾಗಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಮಹಾಕುಂಭದ ನೀರಿನ ಬಗ್ಗೆ ಡಾ. ಅಜಯ್ ಸೋಂಕರ್ ಪ್ರಯೋಗಾಲಯದಲ್ಲಿ ಪರೀಕ್ಷೆಗಳನ್ನು ನಡೆಸಿದ್ದಾರೆ. ಇದು ಗಂಗಾ ನೀರು ಸ್ನಾನಕ್ಕೆ ಸುರಕ್ಷಿತವಾಗಿದೆ ಮತ್ತು ಶುದ್ಧತೆಯ ದೃಷ್ಟಿಯಿಂದ ಇದನ್ನು ಕ್ಷಾರೀಯ ನೀರಿನೊಂದಿಗೆ ಹೋಲಿಸಬಹುದು ಎಂದು ಸಾಬೀತುಪಡಿಸಿದೆ. “ಮಹಾಕುಂಭ ಪ್ರಾರಂಭವಾದಾಗಿನಿಂದ, ನಾನು ವಿವಿಧ ಘಾಟ್‌ಗಳಿಂದ ನೀರಿನ ಮಾದರಿಯನ್ನು ಪರೀಕ್ಷೆ ಮಾಡುತ್ತಿದ್ದೇನೆ. ಇಲ್ಲಿಯವರೆಗೆ, ನನಗೆ ಅಂತಹ ಯಾವುದೇ ಮಲ ಬ್ಯಾಕ್ಟೀರಿಯಾದ ಬೆಳವಣಿಗೆ ಪತ್ತೆಯಾಗಿಲ್ಲ. ನಿನ್ನೆ, ನಾನು ಸಂಗಮಕ್ಕೆ ಹೋಗಿ 5 ಘಾಟ್‌ಗಳಿಂದ ನೀರನ್ನು ಸಂಗ್ರಹಿಸಿದೆ. ಅಲ್ಲಿನ ನೀರಿನ ಮಟ್ಟ ಕಡಿಮೆಯಾಗಿತ್ತು. ಆದರೆ ನಾನು ನೀರಿನ ಮಾದರಿಗಳನ್ನು ತೆಗೆದುಕೊಂಡು ಅದರ ಪಿಹೆಚ್ ಮೌಲ್ಯವನ್ನು ಪರಿಶೀಲಿಸಿದಾಗ ನೀರು ಶುದ್ಧವಾಗಿರುವುದನ್ನು ನೋಡಿ ನನಗೆ ಆಶ್ಚರ್ಯವಾಯಿತು” ಎಂದು ಡಾ. ಅಜಯ್ ಸೋಂಕರ್ ಹೇಳಿದ್ದಾರೆ.
ಡಾ. ಅಜಯ್ ಕುಮಾರ್ ಸೋಂಕರ್ ಯಾರು?:
ಪ್ರಯಾಗರಾಜ್‌ನ ಸಂಗಮ್ ನಗರದ ಸಂಶೋಧನಾ ವಿಜ್ಞಾನಿಯಾಗಿರುವ ಡಾ. ಅಜಯ್ ಕುಮಾರ್ ಸೋಂಕರ್ ಅವರಿಗೆ ಮುತ್ತು ಕೃಷಿ ಕ್ಷೇತ್ರದಲ್ಲಿನ ಅತ್ಯುತ್ತಮ ಸಾಧನೆಗಳಿಗಾಗಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಡಾ. ಸೋಂಕರ್ ಅವರು ಪರ್ಲ್ ಅಕ್ವಾಕಲ್ಚರ್ ರಿಸರ್ಚ್ ಫೌಂಡೇಶನ್‌ನ ಅಧ್ಯಕ್ಷರು. ಅವರು ಈ ಕ್ಷೇತ್ರದಲ್ಲಿ ಸಂಶೋಧನಾ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಅತ್ಯಾಧುನಿಕ ಅಂಗಾಂಶ ಕೃಷಿಯನ್ನು ಬಳಸಿಕೊಂಡು ಮುತ್ತು ತಯಾರಿಸುವ ತಂತ್ರಗಳನ್ನು ಅಭಿವೃದ್ಧಿಪಡಿಸುವಲ್ಲಿ ಅವರ ಸಂಶೋಧನೆ ವಿಶ್ವಾದ್ಯಂತ ಮನ್ನಣೆಯನ್ನು ಗಳಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ