ಮಕರ ಸಂಕ್ರಾಂತಿ ಹಬ್ಬ: ಕೆಆರ್ ಮಾರ್ಕೆಟ್ ಸುತ್ತಮುತ್ತ ರಸ್ತೆಗಳಲ್ಲಿ ಮುಂಜಾನೆಯೇ ಭಾರಿ ಟ್ರಾಫಿಕ್ ಜಾಮ್
ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಈಗಾಗಲೇ ಆರಂಭಗೊಂಡಿದ್ದು, ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ಅಪಾರ ಜನಸಂದಣಿ ಕಂಡುಬಂದಿದೆ. ಕಬ್ಬು, ಎಳ್ಳು, ಬೆಲ್ಲ, ಹೂವು ಹಾಗೂ ಹಣ್ಣುಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಬೆಲೆ ಏರಿಕೆಯಾದರೂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಸಜ್ಜಾಗಿರುವ ಗ್ರಾಹಕರಿಂದ ಅವೆನ್ಯೂ ರಸ್ತೆ ತುಂಬಿ ತುಳುಕುತ್ತಿದೆ. ವ್ಯಾಪಾರಿಗಳಿಗೂ ಇದು ಲಾಭದಾಯಕ ಸಮಯವಾಗಿದೆ.
ಬೆಂಗಳೂರು, ಜನವರಿ 14: ಬೆಂಗಳೂರಿನಲ್ಲಿ ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಕೆಆರ್ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿದೆ. ಇಂದು ಭೋಗಿ ಹಬ್ಬವಾಗಿದ್ದು, ಈಗಾಗಲೇ ಮಾರುಕಟ್ಟೆಗಳಲ್ಲಿ ಜನಜಂಗುಳಿ ಸೇರಿದೆ. ಕಬ್ಬು, ಎಳ್ಳು, ಬೆಲ್ಲ ಸೇರಿದಂತೆ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸುವುದರಲ್ಲಿ ಜನ ನಿರತರಾಗಿದ್ದಾರೆ. ಕಳೆದ ಎರಡು ದಿನಗಳಿಂದ ವ್ಯಾಪಾರ, ವಹಿವಾಟು ಭಾರಿ ಹೆಚ್ಚಾಗಿದೆ. ಬೆಳಗ್ಗೆ 3-4 ಗಂಟೆಯಿಂದಲೇ ಜನರು ಕೆಆರ್ ಮಾರುಕಟ್ಟೆಯತ್ತ ತೆರಳುತ್ತಿದ್ದು, ಅವೆನ್ಯೂ ರಸ್ತೆ ಸಂಪೂರ್ಣವಾಗಿ ಗ್ರಾಹಕರಿಂದ ತುಂಬಿ ತುಳುಕುತ್ತಿದೆ.
ಬೆಲೆಗಳು ದುಪ್ಪಟ್ಟಾಗಿದ್ದರೂ, ಹಬ್ಬವನ್ನು ಅದ್ದೂರಿಯಾಗಿ ಆಚರಿಸುವ ಸಲುವಾಗಿ ಜನರು ಖರೀದಿಯಲ್ಲಿ ತೊಡಗಿದ್ದಾರೆ. ಮಾರುಕಟ್ಟೆಯ ಸುತ್ತಮುತ್ತ ಟ್ರಾಫಿಕ್ ಇಂದು ಮತ್ತು ನಾಳೆಯೂ ಮುಂದುವರೆಯುವ ನಿರೀಕ್ಷೆಯಿದೆ.
