ನೇಹಾ ಹಿರೇಮಠ್ ತಂದೆ-ತಾಯಿಗೆ ಸಾಂತ್ವನ ಹೇಳಿದ ಮಾಳವಿಕಾ; ಸರ್ಕಾರದ ವಿರುದ್ಧ ಆಕ್ರೋಶ
‘ಏನೂ ನಡೆದೇ ಇಲ್ಲ ಎಂಬಂತೆ ಇರುವವರು ಯಾವ ರೀತಿಯ ನ್ಯಾಯ ಕೊಡಲು ಸಾಧ್ಯ? ಗುರುವಾರ ಘಟನೆ ನಡೆದರೂ ಮಂಗಳವಾರದ ತನಕ ಮನೆಯವರನ್ನು ಮಾತನಾಡಿಸಲು ಮುಖ್ಯಮಂತ್ರಿಗಳಿಗೆ ಸಮಯವೇ ಇರಲಿಲ್ಲ. ಇದು ಅವರ ಧೋರಣೆ. ಎಲ್ಲವನ್ನೂ ರಾಜಕೀಯಗೊಳಿಸಿ, ಮತಕ್ಕಾಗಿ ಏನನ್ನ ಬೇಕಾದರೂ ಮಾಡಲು ಸಿದ್ಧವಾಗಿರುವ ಪಕ್ಷ ಅವರದ್ದು’ ಎಂದು ನಟಿ ಮಾಳವಿಕಾ ಅವಿನಾಶ್ ಹೇಳಿದ್ದಾರೆ.
ಪಾಗಲ್ ಪ್ರೇಮಿ ಫಯಾಜ್ನಿಂದ ಕೊಲೆಯಾದ ನೇಹಾ ಹಿರೇಮಠ್ ಸಾವಿಗೆ (Neha Hiremath Death) ನ್ಯಾಯ ಸಿಗಬೇಕು ಎಂದು ಎಲ್ಲರೂ ಒತ್ತಾಯಿಸುತ್ತಿದ್ದಾರೆ. ಈಗ ನಟಿ ಮಾಳವಿಕಾ ಅವಿನಾಶ್ (Malavika Avinash) ಅವರು ನೇಹಾ ಹಿರೇಮಠ್ ಮನೆಗೆ ಭೇಟಿ ನೀಡಿದ್ದಾರೆ. ಅವರ ತಂದೆ-ತಾಯಿಗೆ (Neha Hiremath parents) ಸಾಂತ್ವನ ಹೇಳಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ದೇಶವೇ ಬೆಚ್ಚಿಬೀಳುವಂತಹ ಘಟನೆ ನಮ್ಮ ಹುಬ್ಬಳ್ಳಿಯಲ್ಲಿ ನಡೆದಿದೆ. ಅತ್ಯಂತ ಭರ್ಬರ ರೀತಿಯಲ್ಲಿ ನೇಹಾ ಹಿರೇಮಠ್ ಕೊಲೆ ಆಗಿದೆ. ಅದು ಕೂಡ ಕಾಲೇಜು ಪರಿಸರದಲ್ಲಿ ಆಗಿದೆ ಎಂಬುದು ಹೆಚ್ಚು ಆತಂಕವನ್ನು ಮೂಡಿಸಿದೆ. ಹೆಣ್ಣುಮಕ್ಕಳಿಗೆ ಕಾಲೇಜು ಕ್ಯಾಂಪಸ್ನಲ್ಲೇ ರಕ್ಷಣೆ ಇಲ್ಲ ಎಂದರೆ ಅವರನ್ನು ಕಾಲೇಜಿಗೆ ಕಳಿಸುವುದು ಹೇಗೆ ಎಂಬ ನಿಟ್ಟಿನಲ್ಲಿ ಎಲ್ಲ ತಂದೆ-ತಾಯಂದಿರು ಭಯಭೀತರಾಗಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ಕೊಡಬೇಕು ಎಂದು ಹೇಳುತ್ತೇನೆ. ಆಗ ಮಾತ್ರ ನ್ಯಾಯ ಸಿಗುತ್ತದೆ. ರಾಜ್ಯ ಸರ್ಕಾರದ ಧೋರಣೆ ಏನು ಎಂಬುದನ್ನು ನೋವು ಈಗಾಗಲೇ ನೋಡಿದ್ದೇವೆ. ಮೊದಲು ಏನೂ ನಡೆದೇ ಇಲ್ಲವೇನೊ ಎಂಬ ರೀತಿಯಲ್ಲಿ ಹೇಳಿದರು. ಆಮೇಲೆ ಅವರವರ ವೈಯಕ್ತಿತ ಸಮಸ್ಯೆ ಎಂದು ವಿಚಾರವನ್ನು ತಳ್ಳಿಹಾಕುವ ಪ್ರಯತ್ನ ಮಾಡಿದರು. ಯಾವುದೋ ಒಂದು ಸಮಾಜದ ಓಲೈಕೆಗಾಗಿ, ಮತಗಳಿಗಾಗಿ ಜನರಿಗೆ ಸುರಕ್ಷತೆ ಇಲ್ಲದಂತೆ, ನ್ಯಾಯ ಇಲ್ಲದಂತೆ ಮಾಡುವುದು ವಿಷಾದನೀಯ. ರಾಜ್ಯ ಸರ್ಕಾರವನ್ನು ಇಡೀ ದೇಶವೇ ನೋಡುತ್ತಿದೆ ಎಂಬುದನ್ನು ಮುಖ್ಯಮಂತ್ರಿಗಳು ಹಾಗೂ ಇಲ್ಲಿನ ಎಲ್ಲ ಸಚಿವರು ನೆನಪಿಟ್ಟುಕೊಳ್ಳಬೇಕು. ಅವರು ಮಾಡುವ ತನಿಖೆಯಲ್ಲಿ ನಮಗೆ ನಂಬಿಕೆ ಇಲ್ಲ’ ಎಂದಿದ್ದಾರೆ ಮಾಳವಿಕಾ ಅವಿನಾಶ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.