ಚಾಮರಾಜನಗರ: ಚಿರತೆ ಸೆರೆಗೆ ಇಟ್ಟಿದ್ದ ಬೋನಿನಲ್ಲಿ ಸಿಕ್ಕಿಬಿದ್ದ ವ್ಯಕ್ತಿ!
ಚಿರತೆ ಸೆರೆಗೆಂದು ಇಟ್ಟಿದ್ದ ಬೋನಿನಲ್ಲಿ ವ್ಯಕ್ತಿಯೊಬ್ಬರು ಸಿಲುಕಿದ ಘಟನೆ ಯಳಂದೂರು ತಾಲೂಕಿನ ಗಂಗವಾಡಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಅದೃಷ್ಟವಶಾತ್ ಅವರು ಯಾವುದೇ ಪ್ರಾಣಾಪಾಯ ಸಂಭವಿಸದೆ ಪಾರಾಗಿದ್ದಾರೆ. ಅಷ್ಟಕ್ಕೂ ಆ ವ್ಯಕ್ತಿ ಚಿರತೆ ಬೋನಿಗೆ ಬಿದ್ದಿದ್ಹೇಗೆ? ಅಲ್ಲೇನಾಯ್ತು? ಕೊನೆಗೆ ಬಚಾವಾಗಿದ್ಹೇಗೆ? ಎಲ್ಲ ಮಾಹಿತಿ ಇಲ್ಲಿದೆ.
ಚಾಮರಾಜನಗರ, ಡಿಸೆಂಬರ್ 23: ಚಿರತೆ ಸೆರೆಗೆ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿನಲ್ಲಿ ವ್ಯಕ್ತಿಯೊಬ್ಬರು ಸಿಲುಕಿಕೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಗಂಗವಾಡಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಕಿಟ್ಟಿ ಎಂಬ ವ್ಯಕ್ತಿ ಕುತೂಹಲದಿಂದ ಚಿರತೆ ಹಿಡಿಯಲು ಇಟ್ಟಿದ್ದ ಬೋನಿನ ಒಳಗೆ ತೆರಳಿದ್ದಾಗ, ಆಕಸ್ಮಿಕವಾಗಿ ಬೋನಿನ ಗೇಟ್ ಲಾಕ್ ಆಗಿ ಅವರು ಒಳಗೇ ಸಿಲುಕಿಕೊಂಡರು. ಬೋನಿನೊಳಗೆ ಕಾಲಿಟ್ಟ ಕೂಡಲೇ ಗೇಟ್ ಮುಚ್ಚಿಕೊಂಡ ಪರಿಣಾಮ, ಕಿಟ್ಟಿ ಸುಮಾರು ಮೂರು ಗಂಟೆಗಳ ಕಾಲ ಒಳಗೇ ಒದ್ದಾಡಿದ್ದಾರೆ. ಮೊಬೈಲ್ ಸಹ ತೆಗೆದುಕೊಂಡು ಹೋಗದ ಕಾರಣ ಕಾಲ್ ಮಾಡಿ ಯಾರಿಗೂ ತಿಳಿಸುವ ಸ್ಥಿತಿಯಲ್ಲಿ ಕಿಟ್ಟಿ ಇರಲಿಲ್ಲ. ಕೊನೆಗೆ ಜಮೀನಿಗೆ ಕೆಲಸಕ್ಕೆ ಬಂದ ಸ್ಥಳೀಯರು ಬೋನಿನೊಳಗೆ ವ್ಯಕ್ತಿ ಸಿಲುಕಿರುವುದನ್ನು ಗಮನಿಸಿ ತಕ್ಷಣವೇ ನೆರವಿಗೆ ಧಾವಿಸಿದರು. ಸ್ಥಳೀಯರ ಸಹಾಯದಿಂದ ಬೋನಿನ ಗೇಟ್ ತೆರೆಯಲಾಗಿದ್ದು, ಕಿಟ್ಟಿ ಸುರಕ್ಷಿತವಾಗಿ ಹೊರಬಂದಿದ್ದಾರೆ.
