ನಾಗಮಂಗಲ ಗಲಭೆ ಕುಮಾರಸ್ವಾಮಿ ನಿರ್ದೇಶನದಂತೆ ನಡೆದಿರಬಹುದು: ಡಿಕೆ ಸುರೇಶ್ ಗಂಭೀರ ಆರೋಪ

ನಾಗಮಂಗಲ ಗಲಭೆ ಕುಮಾರಸ್ವಾಮಿ ನಿರ್ದೇಶನದಂತೆ ನಡೆದಿರಬಹುದು: ಡಿಕೆ ಸುರೇಶ್ ಗಂಭೀರ ಆರೋಪ

Sunil MH
| Updated By: Ganapathi Sharma

Updated on: Sep 14, 2024 | 12:40 PM

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ನಡೆದ ಕೋಮು ಗಲಭೆ ಸಂಬಂಧ ಕಾಂಗ್ರೆಸ್ ನಾಯಕ ಡಿಕೆ ಸುರೇಶ್ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಗಲಭೆ ಕುಮಾರಸ್ವಾಮಿ ನಿರ್ದೇಶನದಂತೆಯೇ ನಡೆದಿರಬಹುದು ಎಂದು ಅವರು ಆರೋಪಿಸಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 14: ನಾಗಮಂಗಲ ಕೋಮುಗಲಭೆ ವಿಚಾರವಾಗಿ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಮಾಜಿ ಸಂಸದ ಡಿಕೆ ಸುರೇಶ್, ಗಲಭೆಯನ್ನು ಕುಮಾರಸ್ವಾಮಿಯೇ ಮಾಡಿಸಿರಬಹುದು ಎಂದಿದ್ದಾರೆ. ಗಲಭೆಯನ್ನು ಕಾಂಗ್ರೆಸ್​​ನವರು ಮಾಡಿಸಿರಬಹುದು ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ ಎಂದು ಮಾಧ್ಯಮ ಪ್ರತಿನಿಧಿಗಳು ಸುರೇಶ್ ಬಳಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಅವರ (ಕುಮಾರಸ್ವಾಮಿ) ನಿರ್ದೇಶನದಲ್ಲಿಯೇ ನಡೆದಿರಬಹುದು ಎಂದರು.

ಇಲ್ಲಿ ಅಶಾಂತಿ ಮೂಡಿಸಬೇಕು ಎಂಬ ಭಾವನೆಯಿಂದ ಕುಮಾರಸ್ವಾಮಿ ಪ್ರತಿ ವಾರ ಬಂದು ಏನೇನೋ ಹೇಳಿಕೆಗಳನ್ನು ಕೊಟ್ಟು ಹೋಗುತ್ತಿರುತ್ತಾರೆ. ಅದನ್ನು ನಾನು ಹೇಳಬಹುದಲ್ಲವೇ? ಅವರು ಏನು ರಾಜಕೀಯ ಆರೋಪ ಮಾಡುತ್ತಾರೆಯೋ ನಾನು ಸಹ ಅದೇ ರೀತಿ ಮಾಡುತ್ತೇನೆ ಎಂದು ಡಿಕೆ ಸುರೇಶ್ ಹೇಳಿದರು.

ಅಲ್ಪಸಂಖ್ಯಾತರ ಓಲೈಕೆ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಯಾರ ತುಷ್ಟೀಕರಣದ ಪ್ರಶ್ನೆಯೂ ಇಲ್ಲ. ಕಾನೂನು ಎಲ್ಲರಿಗೂ ಒಂದೇ. ನಾವು ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಕುವೆಂಪು ಕನಸು, ಬಸವಣ್ಣನವರ ತತ್ವಗಳು, ಅಂಬೇಡ್ಕರ್ ಅವರ ಆಶಯ, ಗಾಂಧೀಜಿಯವರ ಕನಸಿನ ಮೇಲೆ ಕಾಂಗ್ರೆಸ್ ನಡೆಯುತ್ತಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ