ಕೋಮುವಾದಿ ಕಲ್ಲಡ್ಕ ಪ್ರಭಾಕರ್ ಭಟ್​ರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಮಂಗಳೂರು ವಿವಿ ಪ್ರತಿಷ್ಠೆ ಹಾಳುಮಾಡಿಕೊಂಡಿದೆ: ಸಿ ಎಫ್ ಐ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 30, 2022 | 10:27 PM

ಪ್ರಭಾಕರ್ ಭಟ್ ಅವರಿಗೆ ನೀವು ಏನು ಹೇಳಬಯಸುತ್ತೀರಿ ಅಂತ ಕೇಳಿದಾಗ, ಅವರಿಗೆ ಕಿಂಚಿತ್ತಾದರೂ ನೈತಿಕತೆ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿ ಇದ್ದರೆ ಭಾಷಣ ಮಾಡದೆ ಅವರು ಹೊರಬರಬೇಕು ಎಂದು ಯುವತಿ ಹೇಳಿದರು.

ಮಂಗಳೂರು: ಬುಧವಾರದಂದು ಮಂಗಳೂರು ವಿಶ್ವವಿದ್ಯಾಲಯದ (Mangalore University) ವಿದ್ಯಾರ್ಥಿ ಪರಿಷತ್ ಉದ್ಘಾಟನೆ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ (Kalladka Prabhakar Bhat) ಅವರನ್ನು ಆಹ್ವಾನಿಸಿದ್ದರ ವಿರುದ್ಧ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯ (Campus Front of India) ರ್ಯಕರ್ತರು ಪ್ರತಿಭಟನೆ ನಡೆಸಿದರು. ಟಿವಿ9 ಕನ್ನಡ ಚ್ಯಾನೆಲ್ ಮಂಗಳೂರು ವರದಿಗಾರ ಅವರನ್ನು ಮಾತಾಡಿಸಿ ಪ್ರತಿಭಟಿಸುತ್ತಿರುವ ಕಾರಣ ಕೇಳಿದರು. ಒಬ್ಬ ಕಾರ್ಯಕರ್ತೆ ಮಾತಾಡಿ ಮಂಗಳೂರು ವಿಶ್ವವಿದ್ಯಾಲಯ ಒಂದು ಪ್ರತಿಷ್ಠಿತ ವಿವಿ ಅನಿಸಿಕೊಂಡಿತ್ತು ಆದರೆ, ಕೋಮುವಾದ ಹರಡುವ ಒಬ್ಬ ಕ್ರಿಮಿನಲ್ ರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವ ಮೂಲಕ ಅದು ಪ್ರತಿಷ್ಠೆಯನ್ನು ಹಾಳು ಮಾಡಿಕೊಂಡಿದೆ ಎಂದು ಹೇಳಿದರು. ಈ ವ್ಯಕ್ತಿಯ ಹಿನ್ನೆಲೆಯನ್ನು ಗಮನಿಸಿದ್ದೇಯಾದರೆ ಅವರು ಸಮಾಜದಲ್ಲಿ ಕೋಮುವಾದ ವಿಷಬೀಜ ಬಿತ್ತುವುದನ್ನು ಬಿಟ್ಟು ಬೇರೇನೂ ಮಾಡಿಲ್ಲ ಎಂದು ಯುವತಿ ಹೇಳಿದರು.

ಪ್ರತಿಭಟನೆ ನಡೆಸುವ ಮೊದಲು ವಿವಿಯ ಆಡಳಿತ ಮಂಡಳಿಯನ್ನು ಸಂಪರ್ಕಿಸಿದ್ದೀರಾ ಅಂತ ಕೇಳಿದಾಗ ಕಾರ್ಯಕರ್ತೆಯು, ಒಂದು ವಿಜ್ಞಾಪನಾ ಪತ್ರ ಕೊಟ್ಟಿದ್ದು ನಿಜ, ಅಷ್ಟಾಗಿಯೂ ಪ್ರಭಾಕರ್ ಭಟ್ ಆಗಮಿಸಿದ್ದಾರೆಂದರೆ ಪತ್ರವನ್ನು ಕಡೆಗಣಿಸಲಾಗಿದೆ ಅನ್ನೋದು ವೇದ್ಯವಾಗುತ್ತದೆ ಎಂದು ಹೇಳಿದರು. ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತದೆ. ಇಂಥ ಸ್ಥಳಕ್ಕೆ ಕೋಮುವಾದ ಹರಡುವ ಕ್ರಿಮಿನಲ್ ರನ್ನು ಕರೆದು ಅವರ ಭವಿಷ್ಯ ಹಾಳುಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಪ್ರಭಾಕರ್ ಭಟ್ ಅವರಿಗೆ ನೀವು ಏನು ಹೇಳಬಯಸುತ್ತೀರಿ ಅಂತ ಕೇಳಿದಾಗ, ಅವರಿಗೆ ಕಿಂಚಿತ್ತಾದರೂ ನೈತಿಕತೆ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿ ಇದ್ದರೆ ಭಾಷಣ ಮಾಡದೆ ಅವರು ಹೊರಬರಬೇಕು ಎಂದು ಯುವತಿ ಹೇಳಿದರು.

ಪ್ರಭಾಕರ್ ಭಟ್ ಅವರನ್ನು ಕ್ರಿಮಿನಲ್ ಎಂದು ಕರೆಯಲು ನಿಮ್ಮಲ್ಲಿ ಪುರಾವೆಯೇನಾದರೂ ಇದೆಯೇ? ಯಾವುದಾದರೂ ಪೊಲೀಸ್ ಸ್ಟೇಷನ್ ನಿಂದ ದಾಖಲೆ ಸಂಗ್ರಹಿಸಿರುವಿರಾ ಆಂತ ಕೇಳಿದಾಗ ಕಾರ್ಯಕರ್ತೆಯು, ಭಾರತದ ಒಂದು ಭಾಗವನ್ನು ಪಾಕಿಸ್ತಾನ ಎಂದು ಹೇಳುವ ಭಾರತದ ಏಕೈಕ ವ್ಯಕ್ತಿ ಕಲ್ಲಡ್ಕ ಪ್ರಭಾಕರ್ ಭಟ್, ಅವರು ಉಲ್ಲಾಳವನ್ನು ಪಾಕಿಸ್ತಾನದ ಭಾಗ ಅಂತ ಕರೆದಿದ್ದರು. ಇದಕ್ಕಿಂತ ದೊಡ್ಡ ದೇಶದ್ರೋಹ ಬೇಕೇ? ಪಾಕಿಸ್ತಾನಕ್ಕೆ ಹೋಗಿ, ತಾಲಿಬಾನ್ ಗೆ ಹೋಗಿ ಅಂತ ಅವರು ದೇಶದ್ರೋಹದ ಮಾತುಗಳನ್ನಾಡುತ್ತಾರೆ ಎಂದು ಕಾರ್ಯಕರ್ತೆ ಹೇಳಿದರು.

ಇದನ್ನೂ ಓದಿ:   ಮಂಗಳೂರು ವಿವಿ ಕಾರ್ಯಕ್ರಮಕ್ಕೆ ಕಲ್ಲಡ್ಕ ಪ್ರಭಾಕರ್ ಭಟ್ ಅತಿಥಿ: CFI ಪ್ರತಿಭಟನೆ, ಇಬ್ಬರು ಪೊಲೀಸರ ವಶಕ್ಕೆ