ಮಂಗಳೂರು: ಭಾರತ್ ಮಾತಾ ಕೀ ಜೈ ಎಂದವರ ಮೇಲೆ ದಾಳಿ, ಚೂರಿ ಇರಿತ; ಸಿಸಿಟಿವಿ ದೃಶ್ಯ ಇಲ್ಲಿದೆ
ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದವರನ್ನು ಗುಂಪೊಂಡು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ಮಾಡಿ, ಚೂರಿಯಿಂದ ಇರಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಿಯಾರ್‌ನಲ್ಲಿ ನಡೆದಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ವಿಡಿಯೋ ಇಲ್ಲಿ ನೋಡಿ.
ಮಂಗಳೂರು, ಜೂನ್ 10: ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಭಾನುವಾರ ಪ್ರಮಾಣವಚನ ಸ್ವೀಕರಿಸುತ್ತಿದ್ದ ಹಿನ್ನಲೆಯಲ್ಲಿ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರ (BJP Workers) ಸಂತೋಷ ಮುಗಿಲುಮುಟ್ಟಿತ್ತು. ಆದರೆ ಇದೇ ಸಂತೋಷ ಕಡಲನಗರಿ ಮಂಗಳೂರಿನಲ್ಲಿ (Mangaluru) ಚೂರಿ ಇರಿತಕ್ಕೆ ಕಾರಣವಾಗಿದೆ. ಭಾರತ್ ಮಾತಾ ಕೀ ಜೈ ಎಂದವರ ಮೇಲೆ ದುರುಳರು ಅಟ್ಟಹಾಸ ಮೆರೆದಿದ್ದಾರೆ.
ಮೋದಿ ಪ್ರಮಾಣವಚನ ಪ್ರಯುಕ್ತ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಿಯಾರ್‌ನಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವದ ಮೆರವಣಿಗೆ ನಡೆಸಿದ್ದರು. ಆದರೆ, ಇದೇ ಮೆರವಣಿಗೆಯಲ್ಲಿ ಭಾಗವಹಿಸಿದ ಇಬ್ಬರು ಬಿಜೆಪಿ ಕಾರ್ಯಕರ್ತರು ಚೂರಿ ಇರಿತಕ್ಕೆ ಒಳಗಾಗಿದ್ದಾರೆ.
ನಡೆದಿದ್ದೇನು?
ಬೋಳಿಯಾರ್‌ನಲ್ಲಿ ನಿನ್ನೆ ವಿಜಯೋತ್ಸವದ ಮೆರವಣಿಗೆ ನಡೆದಿದ್ದು, ಮೆರವಣಿಗೆ ಬೋಳಿಯಾರ್ ಮಸೀದಿ ಮುಂದೆ ಸಾಗಿ ಬರುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಸಾಗಿದ್ದರು. ಇದೇ ಸಂದರ್ಭ ಮಸೀದಿ ಮುಂದೆ ಇದ್ದ ಯುವಕರ ಗುಂಪೊಂದು ಘೋಷಣೆ ಕೂಗುವುದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಆದಾದ ಬಳಿಕ ಮೆರವಣಿಗೆ ಮುಂದೆ ಸಾಗಿತ್ತು. ಇದಾದ ಬಳಿಕ ವಿಜಯೋತ್ಸವ ಮುಗಿಸಿ ಮಸೀದಿ ಬಳಿ ಹೋಂಡಾ ಆ್ಯಕ್ಟೀವಾದಲ್ಲಿ ಬಂದ ಮೂವರು ಬಿಜೆಪಿ ಕಾರ್ಯಕರ್ತರಾದ ಹರೀಶ್, ನಂದಕುಮಾರ್, ಕೃಷ್ಣಕುಮಾರ್ ‘ಬೋಲೋ ಭಾರತ್ ಮಾತಾ ಕೀ ಜೈ’ ಎಂಬ ಘೋಷಣೆ ಕೂಗಿದ್ದರು. ಈ ಸಂದರ್ಭ ಮಸೀದಿ ಮುಂದೆ ಮೊದಲೇ ಗುಂಪು ಸೇರಿದ್ದ ಸುಮಾರು 25ಕ್ಕೂ ಹೆಚ್ಚು ಯುವಕರ ಗುಂಪು ಈ ಮೂವರನ್ನು ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಬೋಳಿಯಾರ್‌ನಲ್ಲಿನ ಬಾರ್ ಮುಂಭಾಗ ತಲುಪುತ್ತಿದ್ದಂತೆ ಯುವಕರ ಗುಂಪು ಹಾಗೂ ಈ ಮೂವರ ನಡುವೆ ವಾಗ್ವಾದ ನಡೆದು ಹರೀಶ್ ಹಾಗೂ ನಂದಕುಮಾರ್‌ಗೆ ಚೂರಿಯಿಂದ ಇರಿಯಲಾಗಿದೆ. ಕೃಷ್ಣಕುಮಾರ್‌ಗೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಲಾಗಿದ್ದು ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.
ಹಲ್ಲೆಯಾಗುತ್ತಿದ್ದಂತೆ ಸ್ಥಳೀಯರು ಒಟ್ಟು ಸೇರಿದ್ದು ಗಂಭೀರ ಗಾಯಗೊಂಡ ಹರೀಶ್ ಹಾಗೂ ನಂದಕುಮಾರ್‌ನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಚೂರಿಯಿಂದ ಇರಿದ ರಭಸಕ್ಕೆ ಒಬ್ಬನ ಬೆನ್ನಿಗೆ ಗಾಯವಾದ್ರೆ ಇನ್ನೊಬ್ಬನ ಸೊಂಟಕ್ಕೆ ಗಂಭೀರ ಗಾಯವಾಗಿದ್ದು ಚಿಕಿತ್ಸೆ ಮುಂದುವರಿಸಲಾಗಿದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿಯಲ್ಲಿ ದಾಖಲಾದ ದೃಶ್ಯಾವಳಿ ಆಧರಿಸಿ ಮೂವರನ್ನು ಕೊಣಾಜೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚೂರಿ ಇರಿತ ಘಟನೆ ನಡೆದ ಹಿನ್ನಲೆಯಲ್ಲಿ ಬೋಳಿಯಾರ್‌ನಲ್ಲಿ ಬಿಗು ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಇನ್ನು ಈ ಘಟನೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಪ್ರತಿಕ್ರಿಯಿಸಿದ್ದು ಯಾರೇ ಕಾನೂನು ಕೈಗೆತ್ತಿಕೊಂಡರು ಕಠಿಣ ಕ್ರಮ ಆಗುತ್ತೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಂಗಳೂರು: ಬಿಜೆಪಿ ವಿಜಯೋತ್ಸವ ಮುಗಿಸಿ ಮನೆಗೆ ಹೋಗುತ್ತಿದ್ದ ಇಬ್ಬರಿಗೆ ಚಾಕು ಇರಿತ, ಮೂವರು ವಶಕ್ಕೆ
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಈ ರೀತಿಯ ಘಟನೆ ಪುನಾರವರ್ತನೆ ಆಗಿರುವ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಪೊಲೀಸ್ ಅಧಿಕಾರಿಗಳ ಸಭೆಯನ್ನು ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿ ಸ್ಥಳದಲ್ಲಿ ಕೃತ್ಯಕ್ಕೆ ಬಳಸಿದ ಚೂರಿ ಪತ್ತೆಯಾಗಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಟ್ಟಿನಲ್ಲಿ ಕೇವಲ ಘೋಷಣೆ ಕೂಗಿದ್ದಕ್ಕೆ ಈ ಘಟನೆ ನಡೆದಿದೆಯಾ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಕಾರಣ ಇದೆಯಾ ಎಂಬುದು ಪೊಲೀಸ್ ತನಿಖೆಯಿಂದ ಇನ್ನಷ್ಟೇ ತಿಳಿದುಬರಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ