ಮಂಗಳೂರು ಬ್ಯಾಂಕ್ ದರೋಡೆ: ಮುಂಬೈ ಗ್ಯಾಂಗ್​​ನ ಮಂಗಳೂರು ಪೊಲೀಸರು ಬೇಟೆಯಾಡಿದ್ಹೇಗೆ?

|

Updated on: Jan 20, 2025 | 8:02 PM

Kotekar Bank Robbers Arrested: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮಂಗಳೂರು ಕೋಟೆಕಾರ್ ಸಹಕಾರಿ ಬ್ಯಾಂಕ್‌ ದರೋಡೆ (Kotekaru Bank Robbery Case) ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ರುವನ್ನೇಲಿಯಲ್ಲಿ ದರೋಡೆಕೋರರನ್ನು ಬಂಧಿಸಲಾಗಿದೆ. ಇನ್ನು ಮಂಗಳೂರು ಪೊಲೀಸರು ಮೂರು ದಿನದಲ್ಲಿ ಆರೋಪಿಗಳನ್ನು ಹೇಗೆ ಬಂಧಿಸಿದ್ದಾರೆ ಎನ್ನುವ ವಿವರ ಇಲ್ಲಿದೆ.

ಮಂಗಳೂರು, (ಜನವರಿ 20): ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಖದೀಮರನ್ನು ಮಂಗಳೂರು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ತಮಿಳುನಾಡಿನ ರುವನ್ನೇಲಿಯಲ್ಲಿ ಮುರುಗಂಡಿ , ಮನಿವೆನನ್ ಹಾಗೂ ಪ್ರಕಾಶ್​ ಅಲಿಯಾಸ್ ಜೋಶ್ವಾ ಬಂಧಿತ ಆರೋಪಿಗಳು. ಮುರುಗಂಡಿ ದೇವರ್ ಈ ಪ್ರಕರಣದ ಮುಖ್ಯ ಕಿಂಗ್ ಪಿನ್.

ಇನ್ನು ಆರೋಪಿಗಳ ಬಂಧನದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್, ದರೋಡೆಕೋರರನ್ನು ಹೇಗೆ ಟ್ರ್ಯಾಕ್ ಮಾಡಿ ಬಂಧಿಸಲಾಯ್ತು ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ. ಬಂಧಿತ ಆರೋಪಿಗಳು ತಮಿಳುನಾಡಿನ ಮೂಲದವರಾಗಿದ್ದು, ಇವರು ಮುಂಬೈ ಮೂಲದ ಗ್ಯಾಂಗ್​ ಸೇರಿಕೊಂಡಿದ್ದರು. ಈ ದರೋಡೆ ನಡೆದಿದ್ದು, ದರೋಡೆಗೆಂದೇ ಮಂಗಳೂರಿಗೆ ಬಂದಿದ್ದರು. ದರೋಡೆ ಮಾಡಿ ಬಳಿಕ ಮಹಾರಾಷ್ಟ್ರ ಮೂಲದ ಫಿಯೆಟ್ ಕಾರಿನಲ್ಲಿ ಕೇರಳದಿಂದ ತಮಿಳುನಾಡಿಗೆ ಪರಾರಿಯಾಗಿದ್ದರು. ನಮ್ಮ ಪೊಲೀಸರು ಮುಂಬೈಯಿಂದ ಮಾಹಿತಿ ಕಲೆ ಹಾಕಿ ತಮಿಳುನಾಡಿಗೆ ತೆರಳಿ ಬಂಧಿಸಿದ್ದಾರೆ.

ಇದನ್ನೂ ಓದಿ: ಮಂಗಳೂರಿನ ಕೋಟೆಕಾರು ಬ್ಯಾಂಕ್​​ ದರೋಡೆ: ಮೂವರು ಆರೋಪಿಗಳ ಬಂಧನ

ರಾಜ್ಯ ಗುಪ್ತಚರ ಇಲಾಖೆ ಈ ಪ್ರಕರಣ ಭೇದಿಸಲು ಸಹಾಯ ಮಾಡಿದ್ದು, ಬಂಧಿತರಿಂದ ಎರಡು ಗೋಣಿ ಚೀಲ, ತಲ್ವಾರ್ ಮತ್ತು ಪಿಸ್ತೂಲ್ ವಶಪಡಿಸಿಕೊಂಡಿದ್ದೇವೆ. ಇನ್ನು ಸ್ಥಳೀಯರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಸ್ಥಳೀಯರ ಬೆಂಬಲ ಇಲ್ಲದೆ ಈ ಕೃತ್ಯ ಮಾಡಲು ಸಾಧ್ಯವಿಲ್ಲ. ಆರೋಪಿಗಳನ್ನಯ ವಶಕ್ಕೆ ಪಡೆದು ತನಿಖೆ ನಡೆಸುತ್ತೇವೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.