Netravathi River: ಬಂಟ್ವಾಳದಲ್ಲಿ ನೇತ್ರಾವತಿ ನದಿ ಪ್ರವಾಹ, ಪುರಸಭಾ ವಾಣಿಜ್ಯ ಸಂಕೀರ್ಣ ಸೇರಿ ಹಲವೆಡೆ ಜಲಾವೃತ
Bantwal Flood: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಜಿಲ್ಲೆಯ ಜೀವನದಿ ಎಂದೇ ಪರಿಗಣಿಸಲಾಗಿರುವ ನೇತ್ರಾವತಿ ಅಪಾಯದ ಮಟ್ಟಕ್ಕಿಂತ 10 ಮೀಟರ್ ಎತ್ತರದಲ್ಲಿ ಹರಿಯುತ್ತಿದೆ. ಪರಿಣಾಮವಾಗಿ ಬಂಟ್ವಾಳ ಪುರಸಭಾ ವಾಣಿಜ್ಯ ಸಂಕೀರ್ಣ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳು ಮುಳುಗಡೆಯಾಗಿವೆ.
ಮಂಗಳೂರು, ಜುಲೈ 31: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ನೇತ್ರವಾತಿ ನದಿ ಉಕ್ಕಿ ಹರಿಯುತ್ತಿದ್ದು, ಬಂಟ್ವಾಳದಲ್ಲಿ ಪ್ರವಾಹ ಉಂಟಾಗಿದೆ. ಬಂಟ್ವಾಳ ಪುರಸಭಾ ವಾಣಿಜ್ಯ ಸಂಕೀರ್ಣ, ಫನ್ ಟೈಂ ರೆಸ್ಟೋರೆಂಟ್, ಮಾಸ್ಟರ್ ಫರ್ನಿಚರ್, ಹೋಟೆಲ್ ಆರ್ಯದುರ್ಗಾ, ಬೇಕರಿ, ಫ್ಯಾನ್ಸಿ, ಮೊಬೈಲ್ ಅಂಗಡಿಗಳಿಗೆ ನೀರು ನುಗ್ಗಿದೆ. ಅಂಗಡಿಗಳ ಮಾಲೀಕರು ಪ್ರವಾಹದ ನೀರಿನಲ್ಲೇ ವಸ್ತುಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುತ್ತಿದ್ದಾರೆ. ಪ್ರತಿಬಾರಿ ಪ್ರವಾಹ ಬಂದಾಗ ಪುರಸಭೆ ಕಟ್ಟಡದ ಅಂಗಡಿಗಳು ಮುಳುಗಡೆಯಾಗುತ್ತಿವೆ.
ನೇತ್ರಾವತಿ ನದಿ ಅಪಾಯದ ಮಟ್ಟಕ್ಕಿಂತ 10 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದು, ಬಂಟ್ವಾಳ ತಾಲೂಕಿನ ಹಲವು ಗ್ರಾಮಗಳು ಮುಳುಗಡೆಯಾಗಿವೆ. ಗೂಡಿನಬಳಿ, ಆಲಡ್ಕ, ಜಕ್ರಿಬೆಟ್ಟು, ಬಸ್ತಿಪಡ್ಪು ಭಾಗಗಳಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಹಲವಾರು ಕುಟುಂಬಗಳು ಸ್ಥಳಾಂತರಗೊಂಡಿವೆ. ನಾವೂರು ಗ್ರಾಮದಲ್ಲಿ ಎಂಟು ಮನೆಗಳು ಜಲಾವೃತಗೊಂಡಿದ್ದು, ಗುಡ್ಡಯಂಗಡಿಯಲ್ಲಿ ಐದು ಹಾಗೂ ಆಲಡ್ಕದಲ್ಲಿ 15ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ.
ಹೆಚ್ಚುವರಿಯಾಗಿ ಪಾಣೆ ಮಂಗಳೂರು, ಬಂಟ್ವಾಳ, ನಾವೂರು, ಸರಪಾಡಿ, ಮಣಿನಾಲ್ಕೂರು ಗ್ರಾಮಗಳಲ್ಲಿ ಕೃಷಿ ಭೂಮಿ ಹಾಗೂ ಹೊಲಗಳು ಮುಳುಗಡೆಯಾಗಿವೆ.
ಇದನ್ನೂ ಓದಿ: ವಯನಾಡು ಭೂಕುಸಿತ: ಕರ್ನಾಟಕದ 6 ಮಂದಿ ಸಾವು, ಮಂಡ್ಯದ ಮಹಿಳೆ ನಾಪತ್ತೆ
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಇರುವ ಕಾರಣ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಅಂಗನವಾಡಿ, ಶಾಲೆ, ಪಿಯು ಕಾಲೇಜುಗಳಿಗೆ ಇಂದು ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ