ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಿರು ಸೇತುವೆ: ಪಲ್ಲಕ್ಕಿ ಉರುಳಿಬಿದ್ದು ಅವಘಡ, ವಿಡಿಯೋ ವೈರಲ್

Edited By:

Updated on: Apr 25, 2026 | 8:49 AM

ದಕ್ಷಿಣ ಕನ್ನಡದ ಮೂಡಬಿದಿರೆಯ ಪುಚ್ಚೆಮೊಗರಿನಲ್ಲಿ ದೈವದ ಭಂಡಾರ ಮೆರವಣಿಗೆ ವೇಳೆ ಕಾಲು ಸಂಕ (ಕಿರು ಸೇತುವೆ) ಕುಸಿದು ಬಿದ್ದ ಪರಿಣಾಮ ಎಂಟು ಮಂದಿ ಗಾಯಗೊಂಡಿದ್ದಾರೆ. ಪಲ್ಲಕ್ಕಿ ಹೊತ್ತು ಸಾಗುತ್ತಿದ್ದಾಗ ಈ ಅವಘಡ ಸಂಭವಿಸಿದ್ದು, ಪಲ್ಲಕ್ಕಿಯಲ್ಲಿದ್ದ ಧಾರ್ಮಿಕ ಪರಿಕರಗಳಿಗೂ ಹಾನಿಯಾಗಿದೆ. ಘಟನೆಯ ವಿಡಿಯೋ ಈಗ ವೈರಲ್ ಆಗುತ್ತಿದೆ.

ಮಂಗಳೂರು, ಏಪ್ರಿಲ್ 25: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಪುಚ್ಚೆಮೊಗರು ಎಂಬಲ್ಲಿ ದೈವದ ಭಂಡಾರ ಮೆರವಣಿಗೆಯ ಸಂದರ್ಭದಲ್ಲಿ ಸಣ್ಣ ಸೇತುವೆ (ಕಾಲು ಸಂಕ) ಮುರಿದು ಬಿದ್ದು ಸಂಭವಿಸಿದ ಅವಘಡದಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ. ಪಲ್ಲಕ್ಕಿಯಲ್ಲಿ ದೈವದ ಭಂಡಾರವನ್ನು ಹೊತ್ತು ಸಾಗುತ್ತಿದ್ದಾಗಲೇ ಈ ದುರ್ಘಟನೆ ಸಂಭವಿಸಿದೆ. ಪುಚ್ಚೆಮೊಗರು ಬಾವದಬೈಲು ಎಂಬಲ್ಲಿಂದ ದೈವದ ಭಂಡಾರವನ್ನು ತಾಕೋಡೆ ಬರ್ಕೆ ಧರ್ಮನೇಮೋತ್ಸವಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತಿತ್ತು. ಕೊಂಬು, ಬ್ಯಾಂಡ್ ವಾದ್ಯಗಳೊಂದಿಗೆ ಭಕ್ತಿ-ಸಂಭ್ರಮದಿಂದ ಮೆರವಣಿಗೆ ಸಾಗುತ್ತಿತ್ತು. ಈ ವೇಳೆ ಹಳ್ಳವೊಂದಕ್ಕೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಕಿರು ಸೇತುವೆಯನ್ನು ಪಲ್ಲಕ್ಕಿ ಹೊತ್ತವರು ದಾಟುತ್ತಿದ್ದಾಗ, ಜನದಟ್ಟಣೆಯ ಭಾರಕ್ಕೆ ಸಂಕವು ಏಕಾಏಕಿ ಕುಸಿದು ಬಿದ್ದಿದೆ.

ಸಂಕ ಮುರಿದು ಬಿದ್ದ ರಭಸಕ್ಕೆ ಪಲ್ಲಕ್ಕಿ ಉರುಳಿದ್ದು, ಸಂಕದ ಮೇಲ್ಭಾಗದ ಬೀಮ್ (ತೊಲೆ) ಪಲ್ಲಕ್ಕಿ ಹೊತ್ತವರ ಮೇಲೆಯೇ ಬಿದ್ದಿದೆ. ಪರಿಣಾಮ ಮಾರೂರಿನ ಸುನಿಲ್ ಶೆಟ್ಟಿ ಮುಕಾಲ್ದಿ, ಲೋಕೇಶ್ ಭಂಡಾರಿ ಸೇರಿದಂತೆ ಪಲ್ಲಕ್ಕಿ ಹೊತ್ತಿದ್ದ ಒಟ್ಟು ಎಂಟು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಘಡದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪಲ್ಲಕ್ಕಿ ಉರುಳಿ ಬಿದ್ದ ಪರಿಣಾಮ ಅದರಲ್ಲಿದ್ದ ಮೊಗಮೂರ್ತಿ ಹಾಗೂ ಇತರ ಪವಿತ್ರ ಧಾರ್ಮಿಕ ಪರಿಕರಗಳಿಗೆ ಹಾನಿಯಾಗಿದೆ ಎನ್ನಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅಶೋಕ್​ ಪೂಜಾರಿ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸ್ಥಳೀಯ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಖಾಸಗಿ ಸುದ್ದಿ ವಾಹಿನಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಕೆಲಕಾಲ ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ ನಂತರ ಟಿವಿ9 ಸುದ್ದಿ ವಾಹಿನಿಯಲ್ಲಿ ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ indiatelevision.com 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More