Mangoes on EMI: ದುಬಾರಿ ಅಪೋಸ್, ಅಲ್ಫೊನ್ಸೋ ಮಾವು ತಿನ್ನಬಯಸುವವರಿಗೆ ಸಂತಸದ ಸಂಗತಿ, ಹಣ್ಣುಗಳನ್ನು ಇನ್ನು ಮಾಸಿಕ ಕಂತುಗಳಲ್ಲಿ ಖರೀದಿಸಬಹುದು
ಈ ಯೋಜನೆಯಲ್ಲಿ ಗ್ರಾಹಕರಿಗೆ ತೊಡಕಾಗಬಹುದಾದ ಸಂಗತಿಯೆಂದರೆ, ಅವರು ಹಣವನ್ನು ಈಎಮ್ ಐಗಳ ಮೂಲಕ ಪಾವತಿಸಲು ಬಯಸಿದಲ್ಲಿ ಕನಿಷ್ಟ ರೂ. 5,000 ಮೌಲ್ಯದ ಹಣ್ಣು ಖರೀದಿಸಬೇಕು.
ಪುಣೆ (ಮಹಾರಾಷ್ಟ್ರ): ಜನಸಾಮಾನ್ಯರಿಗೆ ಮತ್ತು ಮಧ್ಯಮವರ್ಗದ ಕುಟುಂಬಗಳಿಗೆ ರತ್ನಗಿರಿಯ ವಿಖ್ಯಾತ ಹಾಪೂಸ್ (Hapus) ಮತ್ತು ಅಲ್ಪೋನ್ಸೋ (Alphonso) ತಳಿಯ ಮಾವಿನ ಹಣ್ಣುಗಳನ್ನು ಖರೀದಿಸಿ ತಿನ್ನುವುದು ಕಷ್ಟಸಾಧ್ಯ. ಅವುಗಳ ಬೆಲೆಯೇ ಹಾಗಿರುತ್ತದೆ, ಕೈಗೆಟುಕದ ಹಾಗೆ! ಆದರೆ, ಜನಸಾಮಾನ್ಯರ ಈ ಸಮಸ್ಯೆ ಬಗೆಹರಿಯಲಿದೆ. ಪುಣೆಯ ಹಣ್ಣು ವ್ಯಾಪಾರಿಯೊಬ್ಬರು (Pune fruit vendor) ದುಬಾರಿ ಹಾಪೂಸ್ ಮತ್ತು ಅಲ್ಪೋನ್ಸೋ ಮಾವು ಎಲ್ಲರ ವರ್ಗದ ಜನರ ಕೈಗೆ ಸಿಗುವಂತಾಗಲು ಒಂದು ವಿನೂತನ ಮತ್ತು ವಿಶಿಷ್ಟ ಯೋಜನೆ ಜಾರಿಗೆ ತಂದಿದ್ದಾರೆ.
‘ಲಾಕ್ ಡೌನ್ ಗಳಿಂದ ಬಹಳಷ್ಟು ಜನರ ಬದುಕು ದುಸ್ತರಗೊಂಡಿದೆ, ಇನ್ನೂ ಕೆಲವರಲ್ಲಿ ಹಣ್ಣು ಖರೀದಿಸಲು ಹಣವಿರಲ್ಲ ಅಥವಾ ನೌಕರಿ ಕಳೆದುಕೊಂಡಿರುತ್ತಾರೆ. ನಮ್ಮ ವ್ಯಾಪಾರದ ಮೇಲೂ ಸಾಕಷ್ಟು ಹೊಡೆತ ಬಿದ್ದಿದೆ. ಮಾವು ಒಂದು ಕೃಷಿ ಉತ್ಪಾದನೆಯಾಗಿದ್ದು, ಕೊಳೆತುಹೋಗುವ ಅಪಾಯವಂತೂ ಇದ್ದೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಜನರನ್ನು ಆಕರ್ಷಿಸಲು ನಾವೊಂದು ಉಪಾಯ ಮಾಡಿದ್ದೇವೆ. ಮೊಬೈಲ್ ಮತ್ತು ಇತರ ಇಲೆಕ್ಟ್ರಾನಿಕ್ ಉಪಕರಣಗಳನ್ನು ಮಾಸಿಕ ಕಂತುಗಳಲ್ಲಿ (ಈಎಮ್ಐ) ಕೊಳ್ಳಬಹುದಾದರೆ, ಮಾವು ಯಾಕಾಗಬಾರದು?’ ಎಂದು ಗ್ರೀನ್ ಮ್ಯಾಂಗೋಸ್ ಹೆಸರಲ್ಲಿ ಮಾವು ವ್ಯಾಪಾರ ನಡೆಸುವ ಗೌರವ ಸಾಸ್ನೆ ಹೇಳುತ್ತಾರೆ.
ಮಾವಿನ ಹಣ್ಣು ಕಂತುಗಳಲ್ಲಿ ಖರೀದಿಸುವ ಪರಿಕಲ್ಪನೆ ಜನರಿಗೆ ಅರ್ಥವಾಗಲು ಕೊಂಚ ಸಮಯ ಹಿಡಿಯಲಿದೆ ಎಂದು ಗೌರವ್ ಹೇಳುತ್ತಾರೆ.
‘ಈ ಯೋಜನೆಯು ಕಂಪನಿಗಳನ್ನು ಬೆಳೆಸಿದ ಹಾಗೆ ರೈತರ ಬೆಳವಣಿಗೆಗೂ ಕಾರಣವಾಗಲಿದೆ. ಮೊದಲೆಲ್ಲ ಮೊಬೈಲ್ ಫೋನ್ ತಯಾರಿಸುವ ಕಂಪನಿಗಳು ರೂ. 20,000 ಕ್ಕಿಂತ ಹೆಚ್ಚಿನ ಬೆಲೆಯ ಹ್ಯಾಂಡ್ ಸೆಟ್ ಗಳನ್ನು ತಯಾರಿಸುತ್ತಿರಲಿಲ್ಲ. ಆದರೆ ಈಗ ಅವರು ಲಕ್ಷಕ್ಕಿಂತ ಹೆಚ್ಚು ಬೆಲೆಯ ಪೋನ್ ಗಳನ್ನು ಉತ್ಪಾದಿಸುತ್ತಿದ್ದಾರೆ. ಗ್ರಾಹಕರು ಈಎಮ್ಐ ಗಳ ಮೂಲಕ ಪೋನ್ ಗಳನ್ನು ಖರೀದಿಸುತ್ತಿರುವುದರಿಂದ ದುಬಾರಿ ಹ್ಯಾಂಡ್ ಸೆಟ್ ಗಳನ್ನು ತಯಾರಿಸಿ ಮಾರುವುದು ಸಾಧ್ಯವಾಗುತ್ತಿದೆ,’ ಎಂದು ಗೌರವ್ ಹೇಳುತ್ತಾರೆ.
ಗೌರವ್ ಅವರ ಯೋಜನೆ ಈಗಾಗಲೇ ಅನೇಕರನ್ನು ಇಂಪ್ರೆಸ್ ಮಾಡಿದೆ.
ಇದನ್ನೂ ಓದಿ: Gas Prices: ಕೇಂದ್ರದ ಹೊಸ ಮಾರ್ಗಸೂಚಿ; ದೇಶಾದ್ಯಂತ ಗ್ಯಾಸ್ ಬೆಲೆ ಇಳಿಕೆ; ಬೆಂಗಳೂರು ಮೊದಲಾದೆಡೆ ಎಷ್ಟಿದೆ ದರ?
‘ನನ್ನ ಮಕ್ಕಳಿಗೆ ಮಾವಿನಹಣ್ಣು ಬಹಳ ಇಷ್ಟ. ಅದರೆ ಹಣ್ಣುಗಳ ಖರೀದಿ ಮನೆಖರ್ಚನ್ನು ಹೆಚ್ಚಿಸುತ್ತದೆ. ನನಗೆ ಬೆಳೆದ ಮಗನಿದ್ದು ಅವನು ಪ್ರತಿವಾರ ಮಾವು ಕೇಳುತ್ತಾನೆ. ಹಣ್ಣಿಗಾಗಿ ವಾರವಾರವೂ ಖರ್ಚು ಮಾಡಲಾಗಲ್ಲ. ಈ ಜನ ಮಾವಿನ ಹಣ್ಣನ್ನು ಈಎಮ್ಐ ನಲ್ಲಿ ಮಾರಲಾರಂಭಿಸಿದ್ದಾರೆ. ಇದು ನಿಜಕ್ಕೂ ಅದ್ಭುತವಾದ ಪರಿಕಲ್ಪನೆ. ನಾನು ಹೇಳೋದೇನೆಂದರೆ, ಮಾವಿನ ಹಣ್ಣುಗಳನ್ನು ಕಂತಿನಲ್ಲಿ ಕೊಳ್ಳುವುದು ಕಂಡು ಕೇಳರಿಯದ ಸಂಗತಿ,’ ಎಂದು ಗಾಯತ್ರಿ ಗಾರ್ಗೆ ಹೆಸರಿನ ಗ್ರಾಹಕಿ ಹೇಳುತ್ತಾರೆ.
ಈ ಯೋಜನೆಯಲ್ಲಿ ಗ್ರಾಹಕರಿಗೆ ತೊಡಕಾಗಬಹುದಾದ ಸಂಗತಿಯೆಂದರೆ, ಅವರು ಹಣವನ್ನು ಈಎಮ್ ಐಗಳ ಮೂಲಕ ಪಾವತಿಸಲು ಬಯಸಿದಲ್ಲಿ ಕನಿಷ್ಟ ರೂ. 5,000 ಮೌಲ್ಯದ ಹಣ್ಣು ಖರೀದಿಸಬೇಕು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ