Gas Prices: ಕೇಂದ್ರದ ಹೊಸ ಮಾರ್ಗಸೂಚಿ; ದೇಶಾದ್ಯಂತ ಗ್ಯಾಸ್ ಬೆಲೆ ಇಳಿಕೆ; ಬೆಂಗಳೂರು ಮೊದಲಾದೆಡೆ ಎಷ್ಟಿದೆ ದರ?
CNG and PNG Rates: ನೈಸರ್ಗಿಕ ಅನಿಲ ಬೆಲೆ ವಿಚಾರದಲ್ಲಿ ಸರ್ಕಾರ ಹೊಸ ಮಾರ್ಗಸೂಚಿ ರೂಪಿಸಿದ್ದು, ಅದರ ಪರಿಣಾಮವಾಗಿ ದೇಶಾದ್ಯಂತ ಸಿಎನ್ಜಿ ಮತ್ತು ಪಿಎನ್ಜಿ ಗ್ಯಾಸ್ ಬೆಲೆಗಳು ಕಡಿಮೆ ಆಗಿವೆ. ಬೆಂಗಳೂರಿನಲ್ಲಿ ಸಿಎನ್ಜಿ ಬೆಲೆ 89.50 ರೂನಿಂದ 83 ರುಪಾಯಿಗೆ ಇಳಿಯಲಿದೆ. ಪಿಎನ್ಜಿ ಅನಿಲದ ಬೆಲೆ 58.50 ರೂನಿಂದ 52 ರುಪಾಯಿಗೆ ಇಳಿಯುವ ನಿರೀಕ್ಷೆ ಇದೆ.

ಮುಖ್ಯಾಂಶಗಳು
- ಸಿಎನ್ಜಿ ಮತ್ತು ಪಿಎನ್ಜಿ ಅನಿಲಗಳ ಬೆಲೆ ದೇಶಾದ್ಯಂತ ಶೇ. 6ರಿಂದ 10ರಷ್ಟು ಕಡಿಮೆ ಆಗಿದೆ. ಬೆಂಗಳೂರಿನಲ್ಲಿ ಸಿಎನ್ಜಿ ಬೆಲೆ 83 ರು ಹಾಗೂ ಪಿಎನ್ಜಿ ಬೆಲೆ 52 ರುಪಾಯಿಗೆ ಇಳಿಯಲಿದೆ.
- ನೈಸರ್ಗಿಕ ಅನಿಲದ ಬೆಲೆಗೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ರೂಪಿಸಿದೆ. ಏಪ್ರಿಲ್ 7ರಂದು ಕೇಂದ್ರ ಸಂಪುಟ ಈ ಮಾರ್ಗಸೂಚಿಗೆ ಅನುಮೋದನೆ ನೀಡಿದೆ. ಏಪ್ರಿಲ್ 8ರಿಂದ ಬೆಲೆ ಪರಿಷ್ಕರಣೆ ಆಗಲಿದೆ.
- ಇನ್ಮುಂದೆ ಸಿಎನ್ಜಿ ಮತ್ತು ಪಿಎನ್ಜಿ ಬೆಲೆಗಳು ಹೊಸ ಮಾರ್ಗಸೂಚಿ ಪ್ರಕಾರ ಪ್ರತೀ ತಿಂಗಳೂ ಪರಿಷ್ಕರಣೆ ಆಗಲಿವೆ.
ಬೆಂಗಳೂರು: ನೈಸರ್ಗಿಕ ಅನಿಲ ಉತ್ಪನ್ನಗಳಾದ ಸಿಎನ್ಜಿ ಮತ್ತು ಪಿಎನ್ಜಿ ಗ್ಯಾಸ್ಗಳ ಬೆಲೆ (CNG and PNG Gas Prices) ದೇಶಾದ್ಯಂತ ಕಡಿಮೆ ಆಗಿದೆ. ನ್ಯಾಚುರಲ್ ಗ್ಯಾಸ್ನ (Natural Gas) ಬೆಲೆ ನಿಗದಿ ಮಾಡಲು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ರೂಪಿಸಿದೆ. ನಿನ್ನೆ ಏಪ್ರಿಲ್ 7ರಂದು ಕೇಂದ್ರ ಸಂಪುಟ ಈ ಮಾರ್ಗಸೂಚಿಗೆ ಅನುಮೋದನೆಯನ್ನೂ ಕೊಟ್ಟಿದೆ. ಇಂದು ಶನಿವಾರದಿಂದ ದೇಶದ ವಿವಿಧೆಡೆ ವಿವಿಧ ಪ್ರಮಾಣದಲ್ಲಿ ಸಿಎನ್ಜಿ ಮತ್ತು ಪಿಎನ್ಜಿ ಗ್ಯಾಸ್ ಬೆಲೆಗಳು ಇಳಿಕೆ ಕಂಡಿವೆ. ಸಿಎನ್ಜಿ ಗ್ಯಾಸ್ನ ಬೆಲೆ ಶೇ. 6ರಿಂದ 9ರಷ್ಟು ಕಡಿಮೆ ಆದರೆ, ಕೊಳವೆ ಅನಿಲದ (ಪಿಎನ್ಜಿ) ಬೆಲೆ ಶೇ. 10ರಷ್ಟು ಕಡಿಮೆ ಆಗಿದೆ. ಇದರೊಂದಿಗೆ ಬೆಲೆ ಏರಿಕೆಯ ಬಿಸಿಯಲ್ಲಿರುವ ಜನಸಾಮಾನ್ಯರು ಸ್ವಲ್ಪಮಟ್ಟಿದಾದರೂ ನಿಟ್ಟುಸಿರು ಬಿಡುವಂತಾಗಿದೆ. ಹಾಗೆಯೇ ಬಹಳ ವ್ಯಾಪಕವಾಗಿ ಬಳಕೆಯಲ್ಲಿರುವ ಎಲ್ಪಿಜಿ ಗ್ಯಾಸ್ಗಳ ಬೆಲೆಯೂ ಮುಂದಿನ ದಿನಗಳಲ್ಲಿ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸಿಎನ್ಜಿ ಮತ್ತು ಪಿಎನ್ಜಿ ದರ ಕಡಿಮೆ ಮಾಡಲು ಸರ್ಕಾರ ಕೈಗೊಂಡ ಕ್ರಮ ಏನು?
ನೈಸರ್ಗಿಕ ಅನಿಲವನ್ನು ಭಾರತದ ತೈಲ ನಿಕ್ಷೇಪಗಳಿಂದ ಉತ್ಪಾದನೆ ಮಾಡಲಾಗುತ್ತದೆ. ಈ ಮುಂಚೆ ಇವುಗಳ ಬೆಲೆಯನ್ನು ಅಮೆರಿಕ, ಕೆನಡಾ, ರಷ್ಯಾ ಇತ್ಯಾದಿ ಮಾರುಕಟ್ಟೆಗಳ ಗ್ಯಾಸ್ ಹಬ್ಗಳಲ್ಲಿನ ಬೆಲೆಗೆ ಜೋಡಿಸಲಾಗಿತ್ತು. ಈಗ ಇವುಗಳ ಬದಲು ಕಚ್ಛಾ ತೈಲ ಬೆಲೆಗೆ ದೇಶೀಯ ನೈಸರ್ಗಿಕ ಅನಿಲದ ಬೆಲೆಯನ್ನು ಲಿಂಕ್ ಮಾಡಲಾಗಿದೆ.
ಭಾರತದ ಪೆಟ್ರೋಲಿಯಂ ರಿಫೈನಿಂಗ್ ಕಂಪನಿಗಳು ಒಂದು ತಿಂಗಳಲ್ಲಿ ಆಮದು ಮಾಡಿಕೊಳ್ಳಲಾದ ವಿವಿಧ ಕಚ್ಛಾ ತೈಲಗಳ ಸರಾಸರಿ ಬೆಲೆಯಲ್ಲಿ ಶೇ. 10ರಷ್ಟು ದರವನ್ನು ನೈಸರ್ಗಿಕ ಅನಿಲಕ್ಕೆ ನಿಗದಿ ಮಾಡಲಾಗಿದೆ. ಈಗಿರುವ ದರಕ್ಕಿಂತ ಶೇ. 24ರಷ್ಟು ಕಡಿಮೆ ದರವನ್ನು ಗರಿಷ್ಠ ದರ ಎಂದೂ ನಿಗದಿ ಮಾಡಲಾಗಿದೆ. ಈ ಸೂತ್ರಕ್ಕೆ ಕೇಂದ್ರ ಸಂಪುಟ ಅನುಮೋದನೆ ಕೊಟ್ಟಿದ್ದು, ಏಪ್ರಿಲ್ 8ರಿಂದ ಜಾರಿಯಾಗಿದೆ.
ಹಾಗೆಯೇ, ಆರು ತಿಂಗಳಿಗೊಮ್ಮೆ ಬೆಲೆ ಪರಿಷ್ಕರಣೆ ಬದಲು ಮೇಲಿನ ಸೂತ್ರದ ಪ್ರಕಾರ ಪ್ರತೀ ತಿಂಗಳೂ ಅನಿಲ ಬೆಲೆ ಪರಿಷ್ಕರಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಈ ಮುಂಚೆ ಜಾಗತಿಕ ಗ್ಯಾಸ್ ಹಬ್ಗಳಲ್ಲಿರುವ ಅನಿಲ ಬೆಲೆಯ ಆಧಾರದ ಮೇಲೆ ಪ್ರತೀ ವರ್ಷ ಏಪ್ರಿಲ್ 1 ಮತ್ತು ಅಕ್ಟೋಬರ್ 1ರಂದು ಬೆಲೆಗಳ ಪರಿಷ್ಕರಣೆ ಆಗುತ್ತಿತ್ತು.
ಏನಿದು ಸಿಎನ್ಜಿ ಮತ್ತು ಪಿಎನ್ಜಿ?
ಎರಡೂ ಕೂಡ ನೈಸರ್ಗಿಕ ಅನಿಲದ ಉತ್ಪನ್ನಗಳೇ. ಸಿಎನ್ಜಿ ಎಂದರೆ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್. ಇದನ್ನು ವಾಹನಗಳಿಗೆ ಬಳಸಲಾಗುತ್ತದೆ. ಪಿಎನ್ಜಿ ಎಂದರೆ ಪೈಪ್ಡ್ ನ್ಯಾಚುರಲ್ ಗ್ಯಾಸ್. ಇದು ಅಡುಗೆ ಅನಿಲವಾಗಿ ಬಳಕೆ ಆಗುತ್ತದೆ. ಎಲ್ಪಿಜಿ ಮತ್ತು ಪಿಎನ್ಜಿ ಎರಡೂ ಕೂಡ ಅಡುಗೆ ಅನಿಲಗಳೇ ಆದರೂ ವ್ಯತ್ಯಾಸ ಇದೆ. ಪಿಎನ್ಜಿಯು ದ್ರವ ರೂಪದಲ್ಲಿದ್ದು ಕೊಳವೆ ಮೂಲಕ ಕಟ್ಟಡಗಳಿಗೆ ಸರಬರಾಜಾಗುತ್ತದೆ. ಎಲ್ಪಿಜಿಗಿಂತ ಪಿಎನ್ಜಿ ಬೆಲೆ ಬಹಳ ಕಡಿಮೆ ಇದೆ.
ಭಾರತದ ವಿವಿಧ ನಗರಗಳಲ್ಲಿ ಸಿಎನ್ಜಿ ದರ
- ಬೆಂಗಳೂರು: 89.50 ರೂ
- ದೆಹಲಿ: 79.56 ರೂ
- ಮುಂಬೈ: 87 ರೂ
- ಹೈದರಾಬಾದ್: 99.99 ರೂ
- ಕೇರಳ: 85 ರೂ
- ತಮಿಳುನಾಡು: 84 ರೂ
- ಮಧ್ಯಪ್ರದೇಶ: 98 ರೂ
ಇಲ್ಲಿ ದೆಹಲಿಯಲ್ಲಿ ಸಿಎನ್ಜಿ ಗ್ಯಾಸ್ ಬೆಲೆ 79.56 ರೂನಿಂದ 73.59 ರುಪಾಯಿಗೆ ಇಳಿಕೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಇದರ ಬೆಲೆ 83 ರುಪಾಯಿಗೆ ಇಳಿಯಬಹುದು. ಇನ್ನು, ಮುಂಬೈನಲ್ಲಿ 87 ರೂ ಇರುವ ಸಿಎನ್ಜಿ ಬೆಲೆ 79 ರುಪಾಯಿಗೆ ತಗ್ಗುವ ನಿರೀಕ್ಷೆ ಇದೆ.
ಇದನ್ನೂ ಓದಿ: IPL- ಐಪಿಎಲ್ಗೆ ಡಿಜಿಟಲ್ ಧಮಾಕ, ಟಿವಿ ವೀಕ್ಷಕರ ಸಂಖ್ಯೆ ಇಳಿಮುಖ; ಜಿಯೋ ವಿಶ್ವದಾಖಲೆ
ಭಾರತದ ವಿವಿಧೆಡೆ ಈಗಿರುವ ಪಿಎನ್ಜಿ ದರಗಳು
- ಬೆಂಗಳೂರು: 58.50 ರೂ
- ದೆಹಲಿ: 55 ರೂ
- ಮುಂಬೈ: 54 ರೂ
ಇದೀಗ ಹೊಸ ಸೂತ್ರದ ಪ್ರಕಾರ ಬೆಂಗಳೂರಿನಲ್ಲಿ ಪೈಪ್ಡ್ ಗ್ಯಾಸ್ ಬೆಲೆ 52 ರುಪಾಯಿಗೆ ಇಳಿಯುವ ನಿರೀಕ್ಷೆ ಇದೆ. ಇನ್ನು, ದೆಹಲಿ ಮತ್ತು ಮುಂಬೈನಲ್ಲಿ ಈ ಪಿಎನ್ಜಿ ಗ್ಯಾಸ್ ಬೆಲೆ 50 ರೂ ಮತ್ತು 49 ರುಪಾಯಿಗೆ ಇಳಿಕೆ ಆಗುವ ಸಾಧ್ಯತೆ ಇದೆ.
ಭಾರತದ ಒಟ್ಟಾರೆ ತೈಲ ಅಗತ್ಯತೆಯಲ್ಲಿ ಶೇ. 50ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಭಾರತದ ಒಟ್ಟಾರೆ ಇಂಧನ ಅಗತ್ಯಗಳಲ್ಲಿ ದೇಶೀಯವಾಗಿ ಉತ್ಪಾದನೆಯಾಗುವ ನೈಸರ್ಗಿಕ ಅನಿಲದ ಪಾಲು ಸದ್ಯ ಕೇವಲ ಶೇ. 6 ಮಾತ್ರ ಇದೆ. ಇದನ್ನು ಶೇ. 15ಕ್ಕೆ ಹೆಚ್ಚಿಸುವುದು ಸರ್ಕಾರದ ಗುರಿ. ನೈಸರ್ಗಿಕ ಅನಿಲದ ಜೊತೆಗೆ ಭಾರತದಲ್ಲಿ ಒಂದಿಷ್ಟು ಕಚ್ಛಾ ತೈಲ ನಿಕ್ಷೇಪಗಳೂ ಇವೆ. ಇವೆಲ್ಲವನ್ನೂ ಬಳಸಿಕೊಂಡು ಪೆಟ್ರೋಲಿಯಂ ವಲಯದಲ್ಲಿ ಹೆಚ್ಚು ಸ್ವಾವಲಂಬನೆ ಸಾಧಿಸುವ ಗುರಿಯಲ್ಲಿ ಭಾರತ ಇದೆ. ಇದರಿಂದ ಆಮದು ಕಡಿಮೆ ಆಗಿ ಅದರ ಪರಿಣಾಮವಾಗಿ ಆರ್ಥಿಕತೆಗೆ ಬಹಳ ಪ್ರಯೋಜನ ಆಗುತ್ತದೆ.
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:06 pm, Sat, 8 April 23




