ನನ್ನ ತಮ್ಮನ ಪರ ಮಾತಾಡಿದ್ದ ಕುಮಾರಸ್ವಾಮಿಯರಿಗೆ ಕೃತಜ್ಞತೆ ಸಲ್ಲಿಸಲು ಅವರ ಮನೆಗೆ ಹೋಗಿದ್ದೆ: ಪ್ರತಾಪ ಸಿಂಹ

ನನ್ನ ತಮ್ಮನ ಪರ ಮಾತಾಡಿದ್ದ ಕುಮಾರಸ್ವಾಮಿಯರಿಗೆ ಕೃತಜ್ಞತೆ ಸಲ್ಲಿಸಲು ಅವರ ಮನೆಗೆ ಹೋಗಿದ್ದೆ: ಪ್ರತಾಪ ಸಿಂಹ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 13, 2024 | 2:53 PM

ಪ್ರತಾಪ್ ಸಿಂಹ ಮಾತಿನ ಧಾಟಿ ಗಮನಿಸಿದರೆ, ಈ ಬಾರಿಯೂ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಟಿಕೆಟ್ ಅವರಿಗೆ ಸಿಗುವಂತಿದೆ. ಆದರೆ, ಕ್ಷೇತ್ರದ ಕಾರ್ಯಕರ್ತರು ಬೇರೆ ಅಭಿಪ್ರಾಯ ಹೊಂದಿರುವುದು ಮೂಲಗಳಿಂದ ಗೊತ್ತಾಗಿದೆ. ಮತ್ತೊಂದು ಮೂಲದ ಪ್ರಕಾರ ರಾಜ್ಯದ 26 ಬಿಜೆಪಿ ಸಂಸದರಲ್ಲಿ ಅರ್ಧಕ್ಕಿಂತ ಹೆಚ್ಚು ಜನರಿಗೆ 2024 ರ ಚುನಾವಣೆಯಲ್ಲಿ ಟಿಕೆಟ್ ಸಿಗುವ ಸಾಧ್ಯತೆ ಇಲ್ಲ. ಸ್ಮೋಕ್ ಕ್ಯಾನಿಸ್ಟರ್ ಗಳನ್ನು ಸಂಸತ್ ಭವನಕ್ಕೆ ಒಯ್ದು ದೊಂಬಿಯೆಬ್ಬಿಸಿದ ಯುವಕರಿಗೆ ಪ್ರತಾಪ್ ಸಿಂಹ ಹೆಸರಲ್ಲಿ ಪಾಸು ಸಿಕ್ಕ ವಿಷಯ ಬೆಳಕಿಗೆ ಬಂದ ಬಳಿಕ ವರಿಷ್ಠರು ಅಸಮಾಧಾನಗೊಂಡಿದ್ದೂ ನಿಜ.

ಮೈಸೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ (Pratap Simha), ನಿನ್ನೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿಯವರನ್ನು (HD Kumaraswamy) ಅವರ ಬಿಡದಿ ಮನೆಯಲ್ಲಿ ಬೇಟಿಯಾದ ಕಾರಣ ವಿವರಿಸಿದರು. ಮರಗಳ್ಳತನದ ಆರೋಪದಲ್ಲಿ ತಮ್ಮ ಸಹೋದರ ವಿಕ್ರಮ್ ಸಿಂಹನನ್ನು (Vikram Simha) ಎಫ್ ಐಆರ್ ನಲ್ಲಿ ಹೆಸರಿಲ್ಲದಿದ್ದಾಗ್ಯೂ ಪೊಲೀಸರು ಬಂಧಿಸಿದ್ದಾಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪ್ರಕರಣದ ಬಗ್ಗೆ ಎಲ್ಲ ಮಾಹಿತಿಯನ್ನು ಜನರಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿ, ವಿಕ್ರಮ ಸಿಂಹ ತಪ್ಪಿತಸ್ಥ ಅಲ್ಲ ಅಂತ ಹೇಳಿದ್ದರು. ಈ ಹಿನ್ನೆಲೆಯಲ್ಲೇ ಕುಮಾರಸ್ವಾಮಿಯವರಿಗೆ ಧನ್ಯವಾದ ಮತ್ತು ಕೃತಜ್ಞತೆಗಳನ್ನು ಸಲ್ಲಿಸಲು ಅವರನ್ನು ಭೇಟಿಯಾಗಿದ್ದು ಎಂದು ಪ್ರತಾಪ್ ಸಿಂಹ ಹೇಳಿದರು. ಅದಲ್ಲದೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿಯಾಗಿರುವ ಹಿನ್ನೆಲೆಯಲ್ಲಿ ತನ್ನ ಯಶಸ್ಸಿಗಾಗಿ ಕುಮಾರಸ್ವಾಮಿಯವರ ಆಶೀರ್ವಾದ ಸಹ ಪಡೆದಿರುವುದಾಗಿ ಸಂಸದ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ