ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಶಿವಕುಮಾರ ಸ್ವಾಮೀಜಿಗಳ ಹೆಸರು: ಬಸವರಾಜ ಬೊಮ್ಮಾಯಿ

ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಶಿವಕುಮಾರ ಸ್ವಾಮೀಜಿಗಳ ಹೆಸರು: ಬಸವರಾಜ ಬೊಮ್ಮಾಯಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 01, 2022 | 7:32 PM

ಡಾ ಶಿವಕುಮಾರ ಸ್ವಾಮೀಜಿಗಳ ಜಯಂತಿಯನ್ನು ದಾಸೋಹ ದಿನವನ್ನಾಗಿ ಆಚರಿಸುವುದಾಗಿ ಹೇಳಿದ ಮುಖ್ಯಮಂತ್ರಿಗಳು ಶಾಲಾ ಮಕ್ಕಳಿಗೆ ಸರ್ಕಾರ ನಡೆಸುತ್ತಿರುವ ಮಧ್ಯಾಹ್ನ ಬಿಸಿಯೂಟ ಯೋಜನೆಗೆ ಶ್ರೀಗಳ ಹೆಸರಿಡುವುದಾಗಿ ಘೋಷಿಸಿದರು.

ತುಮಕೂರು: ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಡಾ. ಶಿವಕುಮಾರ ಸ್ವಾಮೀಜಿ (Dr Shivakumar Swamiji) ಅವರ 115 ನೇ ಜಯಂತ್ಯುತ್ಸವ ಹಿನ್ನಲೆಯಲ್ಲಿ ಆಯೋಜಿಸಲಾಗಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣ ಮಾಡಿದರು. ಅವರು ಮಾತಾಡಿದ್ದು 10 ನಿಮಿಷವಾದರೂ ಅದರಲ್ಲಿ ಅರ್ಧದಷ್ಟು ಸಮಯ ಅತಿಥಿಗಳ ಮತ್ತು ಗಣ್ಯರ ಹೆಸರುಗಳನ್ನು ಸಂಬೋಧಿಸುವುದರಲ್ಲೇ ವ್ಯಯವಾಯಿತು. ಡಾ ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾದರು ಅಂತ ಹೇಳುವುದು ತನಗಿಷ್ಟವಿಲ್ಲ ಯಾಕೆಂದರೆ, ಅವರು ನಡೆಸಿದ ಬದುಕು, ಸಮಾಜಕ್ಕೆ ನೀಡಿದ ಕಾಣಿಕೆ (contribution to society) ಮತ್ತು ಬಡಮಕ್ಕಳಿಗೆ ಅನ್ನದ ಜೊತೆ ಶಿಕ್ಷಣವನ್ನೂ ಒದಗಿಸಿದ ಮಹಾನ್ ಕಾರ್ಯಗಳ ಮೂಲಕ ನಮ್ಮೆಲ್ಲರಲ್ಲಿ ಅವರು ಜೀವಂತರಾಗಿದ್ದಾರೆ ಮತ್ತು ನಿತ್ಯ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದ ಮುಖ್ಯಮಂತ್ರಿಗಳು, ಸ್ವಾಮಿ ವಿವೇಕಾನಂದರು ಹೇಳಿದ ಮಾತನ್ನು ಜ್ಞಾಪಿಸಿಕೊಂಡರು; ಸಾಧಕನಿಗೆ ಸಾವು ಆಂತ್ಯವಲ್ಲ ಸಾವಿನ ನಂತರವೂ ಆತ ಬದುಕಬಲ್ಲ ಅಂತ ಹೇಳಿ, ಗಣ್ಯರಲ್ಲಿ ಹಾಜರಿದ್ದ ಗೃಹ ಸಚಿವರಿಗೆ ಈ ವಾಕ್ಯವನ್ನು ಇಂಗ್ಲಿಷ್ನಲ್ಲಿ ತರ್ಜುಮೆ (Death is not an end for an achiever. Achievement lives on even after death) ಮಾಡಿ ಹೇಳಿದರು.

ಮಹಾಸ್ವಾಮಿಗಳು 88 ವರ್ಷಗಳ ಕಾಲ ದಾಸೋಹ ನಡೆಸಿದರು, ಅವರು ದಶಕಗಳ ಹಿಂದೆ ಹಚ್ಚಿದ ಒಲೆ ಈಗಲೂ ಉರಿಯುತ್ತಿದೆ ಮುಂದೆಯೂ ಉರಿಯಲಿದೆ ಮತ್ತು ಎಲ್ಲಿಯವರೆಗೆ ದಾಸೋಹದ ಅಡುಗೆ ಕೋಣೆಯ ಕಿಚ್ಚು ಉರಿಯುತ್ತಿರುತ್ತದೋ ಅಲ್ಲಿಯವರೆಗೆ ಬಡ ಮಕ್ಕಳ ಹೊಟ್ಟೆಯ ಕಿಚ್ಚು ತಣ್ಣಗಾಗುತ್ತಿರುತ್ತದೆ. ಶ್ರೀಗಳು ಅನ್ನ-ಅಕ್ಷರ-ಆಶ್ರಯ ದ್ಯೇಯವನ್ನು ಅಕ್ಷರಶಃ ಪಾಲಿಸಿಕೊಂಡು ಬಂದಿದ್ದರು, ನಡೆದಾಡುವ ದೇವರು ಅಂತ ಅವರಿಗೆ ಹೆಸರು ಬಂದಿದ್ದು ಸಮ್ಮನೆ ಅಲ್ಲ ಎಂದು ಬೊಮ್ಮಾಯಿ ಹೇಳಿದರು.

ಸ್ವಾಮೀಜಿಗಳ ಆಶ್ರಯದಲ್ಲಿ ಬೆಳೆದ ಅದೆಷ್ಟೋ ಜನ ಸಮಾಜದಲ್ಲಿ ಗಣ್ಯರಾಗಿ ಗುರುತಿಸಿಕೊಂಡಿದ್ದಾರೆ. ಸಿದ್ದಗಂಗಾ ಮಠದಲ್ಲಿ ಜಾತಿ ಕುಲಗಳ ಬೇಧಭಾವ ಇರಲಿಲ್ಲ, ಸ್ವಾಮೀಜಿಗಳು ಎಲ್ಲರಿಗೂ ಆಶ್ರಯ ನೀಡುತ್ತಿದ್ದರು. ಶ್ರದ್ಧೆ, ನಿಷ್ಠೆ ಮತ್ತು ಪರಿಶ್ರಮ ಶ್ರೀಗಳ ಬದುಕಿದ ಹಾದಿಯಾಗಿತ್ತು ಅದೇ ಹಾದಿಯಲ್ಲಿ ನಾವು ನಡೆಯಬೇಕಿದೆ ಅಂತ ಬೊಮ್ಮಾಯಿ ಹೇಳಿದರು.

ಡಾ ಶಿವಕುಮಾರ ಸ್ವಾಮೀಜಿಗಳ ಜಯಂತಿಯನ್ನು ದಾಸೋಹ ದಿನವನ್ನಾಗಿ ಆಚರಿಸುವುದಾಗಿ ಹೇಳಿದ ಮುಖ್ಯಮಂತ್ರಿಗಳು ಶಾಲಾ ಮಕ್ಕಳಿಗೆ ಸರ್ಕಾರ ನಡೆಸುತ್ತಿರುವ ಮಧ್ಯಾಹ್ನ ಬಿಸಿಯೂಟ ಯೋಜನೆಗೆ ಶ್ರೀಗಳ ಹೆಸರಿಡುವುದಾಗಿ ಘೋಷಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಪ್ರಹ್ಲಾದ್ ಜೋಶಿ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಪಾಲ್ಗೊಂಡಿದ್ದರು.

ಇದನ್ನೂ ಓದಿ: ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳ ಬಗ್ಗೆ ಪಠ್ಯದಲ್ಲಿ ಅಳವಡಿಸುವಂತೆ ಬಿಎಸ್ ಯಡಿಯೂರಪ್ಪ ಮನವಿ