ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳ ಬಗ್ಗೆ ಪಠ್ಯದಲ್ಲಿ ಅಳವಡಿಸುವಂತೆ ಬಿಎಸ್ ಯಡಿಯೂರಪ್ಪ ಮನವಿ
ನಡೆದಾಡುವ ದೇವರಾಗಿರುವ ಶಿವಕುಮಾರ ಶ್ರೀಗಳ 115 ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇವೆ. ಜಾತಿ ಭೇದವಿಲ್ಲದೆ ಪ್ರದೇಶ ಭೇದವಿಲ್ಲದೆ ಅವರು ತಮ್ಮ ಸೇವೆ ಮಾಡಿದ್ದಾರೆ. ಹಲವು ಬಾರಿ ನನ್ನನ್ನು ಪೂಜ್ಯರು ಕರೆಸಿಕೊಂಡು ಮಾರ್ಗದರ್ಶನ ಮಾಡಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ತುಮಕೂರು: ಪಠ್ಯದಲ್ಲಿ ಶಿವಕುಮಾರಶ್ರೀಗಳ ಬಗ್ಗೆ ಅಳವಡಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ. ತುಮಕೂರಿನ ಗುರುವಂದನಾ ಕಾರ್ಯಕ್ರಮದಲ್ಲಿ ಬಿ.ಎಸ್. ಯಡಿಯೂರಪ್ಪ ಈ ಬಗ್ಗೆ ಹೇಳಿದ್ದಾರೆ. ಇಂದು ನಮ್ಮೆಲ್ಲರಿಗೂ ಸೌಭಾಗ್ಯ ದಿನ. ನಡೆದಾಡುವ ದೇವರಾಗಿರುವ ಶಿವಕುಮಾರ ಶ್ರೀಗಳ 115 ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇವೆ. ಜಾತಿ ಭೇದವಿಲ್ಲದೆ ಪ್ರದೇಶ ಭೇದವಿಲ್ಲದೆ ಅವರು ತಮ್ಮ ಸೇವೆ ಮಾಡಿದ್ದಾರೆ. ಹಲವು ಬಾರಿ ನನ್ನನ್ನು ಪೂಜ್ಯರು ಕರೆಸಿಕೊಂಡು ಮಾರ್ಗದರ್ಶನ ಮಾಡಿದ್ದಾರೆ. ಅನ್ನದಾನ ವಿದ್ಯಾದಾನ ಹಲವು ದಾನ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗಿಯಾಗಿರೋದು ಅರ್ಥಪೂರ್ಣವಾಗಿದೆ. ಪೂಜ್ಯರ ವಿಚಾರವನ್ನು ಪಠ್ಯದಲ್ಲಿ ಅಳವಡಿಸುವ ಬಗ್ಗೆ ಮುಖ್ಯ ಮಂತ್ರಿಗಳಿಗೆ ಮನವಿ ಮಾಡುತ್ತೆನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಪೂಜ್ಯರು ನಿಸ್ವಾರ್ಥ ಸೇವೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಕ್ಕೆ ನಾನು ಅಮಿತ್ ಶಾಗೆ ಧನ್ಯವಾದ ತಿಳಿಸುತ್ತೇನೆ. ನರೇಂದ್ರ ಮೋದಿಯವರು ದೇಶದ ರೈತರಿಗೆ ವಿಶೇಷ ಸೇವೆ ಕೊಟ್ಟಿದ್ದಾರೆ. ರೈತರು ಸ್ವಾಭಿಮಾನದಿಂದ ಬಾಳಬೇಕು ಎಂದು ಕನಸು ಕಾಣುತ್ತಿರುವುದು ನಮ್ಮ ಮೋದಿ, ಅಮಿತ್ ಶಾ ಅವರು. ಅಮಿತ್ ಶಾ ಅವರು ಕಾರ್ಯಕ್ರಮಕ್ಕೆ ಬಂದಿರುವುದು ಹೊಸ ರೂಪ ತಂದಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ಇದೇ ವೇಳೆ ಅವರು ನಾಡಿನ ಜನತೆಗೆ ಯುಗಾದಿ ಹಬ್ಬದ ಶುಭಾಶಯ ಕೋರಿದ್ದಾರೆ.
ಅಪರೂಪದ ದಿವ್ಯ ಚೇತನ ನಮ್ಮ ಪೂಜ್ಯರು: ಸುತ್ತೂರು ಶ್ರೀಗಳ ಹೇಳಿಕೆ
ಅಪರೂಪದ ದಿವ್ಯ ಚೇತನ ನಮ್ಮ ಪೂಜ್ಯರು. ಮಠದ ಪರಂಪರೆಯಗೆ ಸ್ವಲ್ಪವೂ ಚ್ಯುತಿ ಬಾರದಂತೆ ನೋಡಿಕೊಂಡವರು ಶ್ರೀಗಳು. ಪ್ರತಿ ದಿನ ಹತ್ತು ಸಾವಿರ ದಾಸೋಹ ಮಾಡೋದು ಸಣ್ಣ ಮಾತಲ್ಲ. ನಾವು ಮನೆಯಲ್ಲಿ ಎರಡು ಮಕ್ಕಳಿದ್ರೆ ಹೇಗೆ ಸಾಕೋದು ಒಂದು ಮಗು ಸಾಕು ಅನ್ನುತ್ತೆವೆ. ದಾಸೋಹದ ಜೊತೆಗೆ ಮಕ್ಕಳಿಗೆ ಮಾತೃ ವಾತ್ಸಲ್ಯ ನೀಡಿದವರು ಶಿವಕುಮಾರ ಸ್ವಾಮಿಗಳು. ಶ್ರೀ ಮಠದ ಏಳಿಗೆಗೆ ಪೂಜ್ಯರು ಸಾಕಷ್ಟು ಶ್ರಮಿಸಿದ್ದಾರೆ. ಈಗ ಸಿದ್ದಗಂಗಾ ಸ್ವಾಮೀಜಿಯವರು ಮಠವನ್ನು ಸಮರ್ಥವಾಗಿ ಮುನ್ನೆಡುಸುತ್ತಿದ್ದಾರೆ ಎಂದು ಸುತ್ತೂರು ಶ್ರೀಗಳು ಮಾತನಾಡಿದ್ದಾರೆ.
ಡಾ. ಶಿವಕುಮಾರ ಸ್ವಾಮೀಜಿ ಜಗತ್ತು ಕಂಡ ಒಂದು ಅಚ್ಚರಿ: ಪ್ರಲ್ಹಾದ್ ಜೋಶಿ
ಡಾ. ಶಿವಕುಮಾರ ಸ್ವಾಮೀಜಿ ಜಗತ್ತು ಕಂಡ ಒಂದು ಅಚ್ಚರಿ. ಅನಾಥರು, ಅಂಧರು, ಮನೆಯಿಂದ ಹೊರಹಾಕಲ್ಪಟ್ಟವರಿಗೆ ಡಾ. ಶಿವಕುಮಾರ ಸ್ವಾಮೀಜಿಯವರು ದೇವರಿದ್ದಂತೆ. ಶ್ರೀಗಳ ಪ್ರೇರಣೆಯಿಂದ ಮೋದಿ ದಾಸೋಹ ಮಾಡಿದ್ದಾರೆ. ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿ ನಮ್ಮ ಸರ್ಕಾರ ನಡೆಯುತ್ತಿದೆ. ಪೂಜ್ಯರು ನಡೆದಂತೆ ನಮ್ಮ ಸರ್ಕಾರವೂ ನಡೆದುಕೊಳ್ಳುತ್ತಿದೆ ಎಂದು ತುಮಕೂರಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದಾರೆ.
ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಶಿವಕುಮಾರ ಶ್ರೀ ಹೆಸರು: ಬಸವರಾಜ ಬೊಮ್ಮಾಯಿ ಘೋಷಣೆ
ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ನಡೆದಾಡಿದ ನೆಲದಲ್ಲಿ ಸ್ಪೂರ್ತಿ, ಹೆಮ್ಮೆ ಇದೆ. ಸುಮಾರು 88 ವರ್ಷ ಈ ಮಠದ ಸೇವೆ ಮಾಡಿದ್ದಾರೆ. ಇದು ದಾಖಲೆ. ಇಡಿ ದೇಶದಲ್ಲೇ ಈ ಕೆಲಸ ಯಾರು ಮಾಡಿಲ್ಲ. ಆ ದಾಖಲೆ ನಮ್ಮ ಶಿವಕುಮಾರ ಸ್ವಾಮಿಗಳು ಮಾಡಿದ್ದಾರೆ. ಶ್ರೀಗಳು ಹಚ್ಚಿದ ಒಲೆಯ ಕಿಚ್ಚು ನಿರಂತರವಾಗಿ ನಡೆಯುತ್ತಿವೆ. ಅವರು ನಮ್ಮ ನಡುವೆ ಜೀವಂತ ಆಗಿದ್ದಾರೆ. ಅವರು ದೈಹಿಕವಾಗಿ ಇಲ್ಲದೆ ಇದ್ದರೂ ಅವರ ನಡೆ ಗೌರವ ನಮ್ಮ ಜೊತೆ ಸದಾ ಇರುತ್ತದೆ. ಬದುಕನ್ನು ಕಟ್ಟಿಕೊಟ್ಟ ಪರಮಪೂಜ್ಯರು ಅವರು. ಎಲ್ಲಾ ಸಮುದಾಯದ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಅದು ಸಾಮಾನ್ಯ ಮಾತಲ್ಲ. ಅದು ದೈವ ಶಕ್ತಿ. ಸ್ವಾಮೀಜಿಯವರು ಯಾವುದೇ ಜಾತಿ ಬೇದ ಮಾಡಿಲ್ಲ. ಸರ್ವೋದಯ ಅಂತ್ಯೋದಯ ಆಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ವೇಳೆ, ಸರ್ಕಾರದ ಮಧ್ಯಾಹ್ಯದ ಬಿಸಿ ಊಟದ ಯೋಜನೆಗೆ ಶಿವಕುಮಾರ ಸ್ವಾಮೀಜಿ ಹೆಸರು ಇಡಲು ಸರ್ಕಾರ ಮುಂದಾಗುತ್ತೆ ಎಂದು ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ 115ನೇ ಜಯಂತಿ ಹಿನ್ನೆಲೆ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ತುಮಕೂರು ಸಿದ್ಧಗಂಗಾ ಮಠದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯುತ್ತಿದೆ. ‘ನಡೆದಾಡುವ ದೇವರ ಬಸವ ಭಾರತ’ ಹೆಸರಿನಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹಿತ ಹಲವು ಗಣ್ಯರು ಪಾಲ್ಗೊಂಡಿದ್ದಾರೆ.
ಇದನ್ನೂ ಓದಿ: ಡಾ. ಶಿವಕುಮಾರ ಸ್ವಾಮೀಜಿ ಜಯಂತೋತ್ಸವ: ಮಠಕ್ಕೆ ಆಗಮಿಸಿ, ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿದ ಅಮಿತ್ ಶಾ
ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿಗಳ 115ನೇ ಜಯಂತೋತ್ಸವ: ವಾಹನ ಸಂಚಾರ, ಪಾರ್ಕಿಂಗ್, ಊಟೋಪಚಾರ ವ್ಯವಸ್ಥೆಯ ಬಗ್ಗೆ ಇಲ್ಲಿದೆ ಮಾಹಿತಿ
Published On - 1:27 pm, Fri, 1 April 22