ಸದಸ್ಯತ್ವ ಅಭಿಯಾನ: ಜಿಲ್ಲಾ ಕಾರ್ಯಕರ್ತರ ಸಾಧನೆ ಬಗ್ಗೆ ರಾಹುಲ್ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದರು

ಆದರೆ ಭಾಷೆಯ ಸಮಸ್ಯೆ ಈ ಸಭೆಯಲ್ಲಿ ಎದ್ದು ಕಾಣುತಿತ್ತು. ಕೆಲ ಪದಾಧಿಕಾರಿಗಳಿಗೆ ಹಿಂದಿ ಮತ್ತು ಇಂಗ್ಲಿಷ್ ಮಾತಾಡುವುದು ಕಷ್ಟವಾಗುತಿತ್ತು. ಶಿವಕುಮಾರ ಅವರು ಕಾರ್ಯಕರ್ತರು ಹೇಳಿದ್ದನ್ನು ರಾಹುಲ್ ಗೆ ಮತ್ತು ರಾಹುಲ್ ಹೇಳಿದ್ದನ್ನು ಅವರಿಗೆ ತರ್ಜುಮೆ ಮಾಡಿ ಹೇಳಿದರು

TV9kannada Web Team

| Edited By: Arun Belly

Apr 01, 2022 | 4:31 PM

ಕಾಂಗ್ರೆಸ್ ನಾಯಕ ಮತ್ತು ಸಂಸತ್ ಸದಸ್ಯ ರಾಹುಲ್ ಗಾಂಧಿಯವರು ಶುಕ್ರವಾರ ಬೆಂಗಳೂರಲ್ಲಿದ್ದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಚೇರಿಯಲ್ಲಿ ಅವರು ಪದಾಧಿಕಾರಿಗಳ (office-bearers) ಸಭೆಯಲ್ಲಿ ಪಾಲ್ಗೊಂಡರು. ಕೆಪಿಸಿಸಿ (KPCC) ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನ (membership drive) ಶುರು ಮಾಡಿದೆ. ಸುಮಾರು ಎರಡು ತಿಂಗಳು ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಅವರು ಮಾಧ್ಯಮಗಳಿಗೆ ನೀಡಿದ ಹೇಳಿಕೆಯ ಪ್ರಕಾರ ಜಿಲ್ಲೆಗಳ ಎಲ್ಲ ಪದಾಧಿಕಾರಿಗಳಿಗೆ ಟಾರ್ಗೆಟ್ ನೀಡಲಾಗಿದೆ. ಅವರ ಸಾಧನೆಗಳು ಹೇಗಿವೆ ಅಂತ ತಿಳಿದುಕೊಳ್ಳಲು ಮತ್ತು ಉತ್ತಮ ಸಾಧನೆ ಮಾಡಿದವರಿಗೆ ಅಭಿನಂದಿಸಲು ರಾಹುಲ್ ಸಮ್ಮುಖದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಒಂದು ವರ್ಚ್ಯುಯಲ್ ಮೀಟಿಂಗ್ ಸಹ ಏರ್ಪಡಿಸಲಾಗಿತ್ತು. ಬೇರೆ ಬೇರೆ ಜಿಲ್ಲೆಗಳ ಅಚೀವರ್ಸ್ ರಾಹುಲ್ ಗಾಂಧಿಯವರೊಂದಿಗೆ ಮಾತಾಡಿದರು.

ಆದರೆ ಭಾಷೆಯ ಸಮಸ್ಯೆ ಈ ಸಭೆಯಲ್ಲಿ ಎದ್ದು ಕಾಣುತಿತ್ತು. ಕೆಲ ಪದಾಧಿಕಾರಿಗಳಿಗೆ ಹಿಂದಿ ಮತ್ತು ಇಂಗ್ಲಿಷ್ ಮಾತಾಡುವುದು ಕಷ್ಟವಾಗುತಿತ್ತು. ಶಿವಕುಮಾರ ಅವರು ಕಾರ್ಯಕರ್ತರು ಹೇಳಿದ್ದನ್ನು ರಾಹುಲ್ ಗೆ ಮತ್ತು ರಾಹುಲ್ ಹೇಳಿದ್ದನ್ನು ಅವರಿಗೆ ತರ್ಜುಮೆ ಮಾಡಿ ಹೇಳಿದರು. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಸವಿತಾ ರಘು ಅವರು ತಮ್ಮ ಸಾಧನೆ ಮತ್ತು ಅನಿಸಿಕೆಗಳನ್ನು ರಾಹುಲ್ ಅವರೊಂದಿಗೆ ಹಂಚಿಕೊಂಡರು. ಜಿಲ್ಲಾ ಪಂಚಾಯತ್ ಸದಸ್ಯರೂ ಆಗಿರುವ ಸವಿತಾ ಅವರು 11,000 ಕ್ಕೂ ಹೆಚ್ಚು ಜನರನ್ನು ಸದಸ್ಯರನ್ನಾಗಿ ಮಾಡಿರುವುದಾಗಿ ಹೇಳಿದಾಗ ರಾಹುಲ್ ಚಪ್ಪಾಳೆ ತಟ್ಟಿ ಅವರನ್ನು ಅಭಿನಂದಿಸಿದರು.

ಚಿಕ್ಕವರಿದ್ದಾಗ ತನ್ನ ಅಜ್ಜಿಯ ಬಾಯಿಂದ ದಿವಂಗತ ಇಂದಿರಾಗಾಂಧಿ ಅವರ ಕುರಿತು ಆಡುತ್ತಿದ್ದ ಮಾತುಗಳನ್ನು ಕೇಳಿ ಕಾಂಗ್ರೆಸ್ ಪಕ್ಷದೆಡೆ ಆಕರ್ಷಿತಳಾದೆ ಎಂದು ಹೇಳಿದ ಸವಿತಾ ಅವರು ಜನ ಬಿಜೆಪಿಯಿಂದ ಬೇಸತ್ತಿದ್ದಾರೆ ಮತ್ತು ಹಿಂದಿನ ಕಾಂಗ್ರೆಸ್ ಸರಕಾರಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಅವರ ಮಾತುಗಳಿಂದ ರಾಹುಲ್ ಗಾಂಧಿ ಮತ್ತು ಡಿಕೆ ಶಿವಕುಮಾರ ಇಂಪ್ರೆಸ್ ಆಗಿದ್ದಂತೂ ಸತ್ಯ.

ಇದನ್ನೂ ಓದಿ:   ನಾವು ಕರ್ನಾಟಕವನ್ನ ರಾಹುಲ್ ಗಾಂಧಿ -ಸೋನಿಯಾ ಗಾಂಧೀಜಿಗೆ ಗೆಲ್ಲಿಸಿ ಕೊಡಬೇಕು :ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕರೆ

Follow us on

Click on your DTH Provider to Add TV9 Kannada